ಭದ್ರಾವತಿ: ಆಸ್ತಿ ವಿವಾದ (Property dispute) ಸಂಬಂಧ ನಡೆದ ಮಾರಾಮಾರಿ ಹಾಗೂ ಕೊಲೆ ಯತ್ನ (Attempt to murder) ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು, ಪ್ರತಿದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳಿಗೆ ಜೈಲು ಶಿಕ್ಷೆ (Imprisonment) ಮತ್ತು ದಂಡ ವಿಧಿಸಿದ್ದಾರೆ.
2021ರ ಜೂನ್ 3ರಂದು ಆಸ್ತಿ ವಿಚಾರವಾಗಿ ಕೊಮರನಹಳ್ಳಿ ತಾಂಡದ ನಿವಾಸಿಗಳ ಮಧ್ಯೆ ಗಲಾಟೆಯಾಗಿತ್ತು. ಒಂದು ಪ್ರಕರಣದಲ್ಲಿ ಆರೋಪಿಗಳಾದ ರವಿ ನಾಯ್ಕ್, ರಾಜ ನಾಯ್ಕ್ , ಲಕ್ಷ್ಮಿ ಬಾಯಿ ಅವರು ಶರತ್, ಸುರೇಂದ್ರ, ವಿನಯ್ ಕುಮಾರ್, ಜಯಾಬಾಯಿ, ಸರೋಜಾ ಬಾಯಿ ಅವರ ಜೊತೆಗೆ ಜಗಳವಾಡಿದ್ದರು. ಶರತ್ ಎಂಬುವವರ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆಗೆ ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಎಎಸ್‌ಐ ತ್ಯಾಗರಾಜ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Charge sheet) ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. ರವಿ ನಾಯ್ಕ್‌ಗೆ 8 ವರ್ಷ ಕಠಿಣ ಶಿಕ್ಷೆ (Rigorous imprisonment) ಹಾಗೂ ಒಟ್ಟು ₹2 ಲಕ್ಷ ದಂಡ (Penalty) ವಿಧಿಸಿದ್ದಾರೆ. ರವಿ ನಾಯ್ಕ್, ರಾಜ ನಾಯ್ಕ್, ಲಕ್ಷ್ಮಿ ಬಾಯಿ ಅವರಿಗೆ 2 ವರ್ಷ ಜೈಲು ಶಿಕ್ಷೆ, ₹20,000 ದಂಡ ವಿಧಿಸಲಾಗಿದೆ. ಇನ್ನು, ನೊಂದ ಶರತ್‌ಗೆ ₹2 ಲಕ್ಷ ಪರಿಹಾರ (Compensation) ನೀಡಲು ಸೂಚಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದ ಮತ್ತೊಂದು ದೂರಿನನ್ವಯ, ರವಿ ನಾಯ್ಕ್ ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿತ್ತು. ಶರತ್, ವಿನಯ್ ಕುಮಾರ್, ಸರೋಜಾ ಬಾಯಿ, ಜಯಾಬಾಯಿ ಅವರು ದಾಳಿ ನಡೆಸಿದ್ದರು. ರವಿ ನಾಯ್ಕ್ ಅವರ ಬೆನ್ನು, ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಎಸ್ಐ ಆಗಿದ್ದ ಕೆ.ಕೆ. ತ್ಯಾಗರಾಜ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆ ಶರತ್‌ಗೆ 8 ವರ್ಷ ಜೈಲು ಶಿಕ್ಷೆ ಹಾಗೂ ₹2.31 ಲಕ್ಷ ದಂಡ ವಿಧಿಸಲಾಗಿದೆ. ಉಳಿದ ಆರೋಪಿಗಳಾದ ವಿನಯ್ ಮತ್ತು ಸರೋಜಾ ಬಾಯಿಗೆ 3 ವರ್ಷ ಶಿಕ್ಷೆ ಹಾಗೂ ತಲಾ ₹62,000 ದಂಡ ವಿಧಿಸಲಾಗಿದೆ. ರವಿ ನಾಯ್ಕ್‌ಗೆ ₹1 ಲಕ್ಷ ಹಾಗೂ ರಾಜಾ ನಾಯ್ಕ್ ಅವರಿಗೆ ₹50,000 ಪರಿಹಾರ ನೀಡುವಂತೆ ನ್ಯಾಯಾಲಯವು ತನ್ನ ಆದೇಶದಲ್ಲಿ (Legal order) ತಿಳಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕಿ (Public Prosecutor) ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.


