ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದಲ್ಲಿನ ರಾಷ್ಟ್ರೀಯತೆಯ ನೈಜ ಸತ್ವವನ್ನು ವ್ಯವಸ್ಥಿತವಾಗಿ ಮರೆಮಾಚಲಾಗಿದೆ. ಭಾರತ ಮತ್ತು ಕರ್ನಾಟಕ ತಾಯಿ-ಮಗಳ ಸಂಬಂಧದಂತೆಯೇ ಹೊರತು ಅವು ಪರಸ್ಪರ ವಿರುದ್ಧವಲ್ಲ ಎಂಬುದು ಕುವೆಂಪು ಅವರ ನಿಲುವಾಗಿತ್ತು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಟಿ.ಎಲ್. ಪ್ರವೀಣ್ ಹೇಳಿದರು.
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಶಿವಮೊಗ್ಗ ಸಾಹಿತ್ಯ ಹಬ್ಬದ ಎರಡನೇ ದಿನದ ಗೋಷ್ಠಿಯಲ್ಲಿ ‘ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆಯ ಸಮನ್ವಯತೆ’ ಕುರಿತು ಅವರು ಮಾತನಾಡಿದರು.

ವಿಭಜಿಸುವ ತಂತ್ರಕ್ಕೆ ಕಿಡಿ
ಕನ್ನಡದ ಅಸ್ಮಿತೆ ಮತ್ತು ಭಾರತೀಯತೆಯ ವಿಚಾರದಲ್ಲಿ ಮುಖಾಮುಖಿ ಮಾಡುವ ಪ್ರಯತ್ನ ನಡೆಯುತ್ತಿದೆ. ಕನ್ನಡಿಗ ಮತ್ತು ಭಾರತೀಯ ಎಂಬ ವಿಷಯಗಳ ನಡುವೆ ಸಂಘರ್ಷ ತರುವುದು ವಿಭಜಿಸುವ ತಂತ್ರವಾಗಿದೆ. ಇದು ಅತ್ಯಂತ ಬಾಲಿಶವಾದದ್ದು. ವೇದ, ಉಪನಿಷತ್ತುಗಳ ಮೂಲಕ ನಾವು ಸಾಧಿಸಿಕೊಂಡು ಬಂದ ಐಕ್ಯತೆಯ ಹಾದಿಯಲ್ಲಿ ಸಾಗುವುದು ಇಂದಿನ ಅಗತ್ಯವಾಗಿದೆ ಎಂದರು.
ಡಾ. ಪ್ರವೀಣ್ ಗೋಷ್ಠಿಯ ಪ್ರಮುಖಾಂಶ
- 1960ರ ನಂತರದ ಸೆಕ್ಯುಲರ್ ರಾಜಕೀಯದ ಕಾಲಘಟ್ಟದಲ್ಲಿ ಕುವೆಂಪು ಸಾಹಿತ್ಯವನ್ನು ಕೇವಲ ಮೌಢ್ಯ ವಿರೋಧಿ ವಿಚಾರಗಳಿಗೆ ಮಾತ್ರ ಸೀಮಿತಗೊಳಿಸಿ, ಅವರ ವಿಶಾಲವಾದ ವೈಚಾರಿಕತೆಯನ್ನು ಮುನ್ನೆಲೆಗೆ ಬರದಂತೆ ಮಾಡಲಾಯಿತು.
- ಪಾಶ್ಚಾತ್ಯ ರಾಷ್ಟ್ರೀಯತೆ ಕೇವಲ ಜನಾಂಗೀಯ ಕಲ್ಪನೆಯ ಮೇಲೆ ನಿಂತಿದ್ದರೆ, ಭಾರತದ ರಾಷ್ಟ್ರೀಯತೆಯು ಆಧ್ಯಾತ್ಮ, ಪರಂಪರೆ ಮತ್ತು ಸಂಸ್ಕೃತಿಯ ಸತ್ವವನ್ನು ಒಳಗೊಂಡಿದೆ ಎಂಬುದನ್ನು ಕುವೆಂಪು ಸಾರಿದ್ದರು.
ಬೆಂಗಳೂರಿನ ಸಹಪ್ರಾಧ್ಯಾಪಕಿ ಡಾ. ಅಶ್ವಿನಿ ದೇಸಾಯಿ ಮಾತನಾಡಿ, ಕುವೆಂಪು ಹಾಗೂ ಮಾಸ್ತಿ ಅವರು ಯುರೋಪಿಯನ್ ವಸಾಹತುಶಾಹಿ ವಿಚಾರಗಳನ್ನು ತಿರಸ್ಕರಿಸಿ ಭಾರತೀಯ ರಾಷ್ಟ್ರೀಯತೆಯನ್ನು ಕಟ್ಟುವ ಕೆಲಸ ಮಾಡಿದರು ಎಂದರು.
ಸಂವಾದದಲ್ಲಿ ಸಮನ್ವಯಕಾರರಾಗಿ ರೋಹಿತ್ ಚಕ್ರತೀರ್ಥ ಪಾಲ್ಗೊಂಡಿದ್ದರು.
