ತೀರ್ಥಹಳ್ಳಿ: ತುಂಗಾ ನದಿ ಪಾತ್ರದ ಮುಂಡುವಳ್ಳಿ ಮರಳು ಕ್ವಾರಿಯಲ್ಲಿ ಅಕ್ರಮ (Illegal sand mining) ನಡೆಯುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮರಳು ದಂಧೆಯಲ್ಲಿ ಅಧಿಕಾರಿಗಳ ಪಾಲೆಷ್ಟು ಎಂದು ಪ್ರಶ್ನಿಸಿದ ಅವರು, ನಿಮಗೆ ಸ್ವಲ್ಪವೂ ಮರ್ಯಾದೆ ಇಲ್ವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಅಧಿಕಾರಿಗಳ ತಂಡದೊಂದಿಗೆ ಶಾಸಕ ಆರಗ ಜ್ಞಾನೇಂದ್ರ ಮರಳು ಕ್ವಾರಿಗೆ (Sand quarry) ಭೇಟಿ ನೀಡಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಸರ್ಕಾರದ ಬೊಕ್ಕಸಕ್ಕೆ ಪೈಸೆ ಲೆಕ್ಕದಲ್ಲಿ ಹಣ ಜಮೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಎಲ್‌ಎ ಆಕ್ರೋಶ, ಇಲ್ಲಿದೆ ಪಾಯಿಂಟ್ಸ್
- ವಾರ್ಷಿಕ 28 ಸಾವಿರ ಟನ್ ಮರಳು ಸಾಗಣೆಗೆ ಅವಕಾಶವಿದೆ. ಕಳೆದ ಎರಡು ವರ್ಷಗಳಲ್ಲಿ ಕೇವಲ 3,700 ಟನ್ ಮರಳಿಗಷ್ಟೇ ಪರ್ಮಿಟ್ (Permit verification) ಪಡೆಯಲಾಗಿದೆ. ಆದರೆ ನದಿಯಿಂದ ಸಾವಿರಾರು ಟನ್ ಮರಳು ಅಕ್ರಮವಾಗಿ ಸಾಗಣೆಯಾಗಿದೆ.
- ಇಷ್ಟು ದೊಡ್ಡ ಪ್ರಮಾಣದ ಮರಳುಗಾರಿಕೆಯಿಂದ ಸರ್ಕಾರಕ್ಕೆ ಕೇವಲ ₹6 ಲಕ್ಷ ಹಣ ಸಂದಾಯವಾಗಿದೆ. ದಾಖಲೆಗಳನ್ನು ನೋಡಿದರೆ ಸರ್ಕಾರದ ಬೊಕ್ಕಸಕ್ಕೆ (Government treasury) ನಯಾಪೈಸೆ ಲಾಭವಾದಂತಿಲ್ಲ.
- ನದಿಯಲ್ಲಿ ಸಾವಿರಾರು ಟನ್ ಮರಳು ಸಾಗಣೆಯಾಗಿದ್ದರೂ, ಯಾವುದೇ ಲೆಕ್ಕಪತ್ರ ಇಲ್ಲ.
ಹಿರಿಯ ಭೂ ವಿಜ್ಞಾನಿ ಅಮಾನತಿಗೆ ಆಗ್ರಹ
ಇದೇ ವೇಳೆ ಆರಗ ಜ್ಞಾನೇಂದ್ರ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ (Department of Mines and Geology) ಆಯುಕ್ತರಿಗೆ ಕರೆ ಮಾಡಿದ್ದರು. ಮರಳು ಅಭಾವ ಸೃಷ್ಟಿಸಿ ಅಧಿಕಾರಿಗಳೇ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಹಿರಿಯ ಭೂ ವಿಜ್ಞಾನಿ ಪಿ.ಕೆ. ನಾಯಕ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು (Suspension order) ಎಂದು ಇಲಾಖೆಯ ಆಯುಕ್ತರನ್ನು ಒತ್ತಾಯಿಸಿದರು. ಉನ್ನತ ಮಟ್ಟದ ತನಿಖೆ (High-level investigation) ನಡೆಸದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕ್ವಾರಿ ನಿರ್ವಹಣೆ ಸಂಬಂಧ ಸರ್ಕಾರದ ಯಾವುದೇ ನಿಯಮಾವಳಿಗಳು (Government regulations) ಇಲ್ಲಿ ಪಾಲನೆಯಾಗುತ್ತಿಲ್ಲ. ಸಾವಿರಾರು ಟನ್ ಮರಳು ದಾಸ್ತಾನು ಮಳಿಗೆಗಳಲ್ಲಿ ಸಂಗ್ರಹವಾಗಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ಈ ಅಕ್ರಮದಲ್ಲಿ ಅಧಿಕಾರಿಗಳ ಶಾಮೀಲಾತಿ ಎದ್ದು ಕಾಣುತ್ತಿದೆ.
– ಆರಗ ಜ್ಞಾನೇಂದ್ರ, ಶಾಸಕ
ಸ್ಥಳಕ್ಕೆ ಭೇಟಿ ನೀಡಿದ್ದ ಜಂಟಿ ನಿರ್ದೇಶಕರು (Joint Director) ಮೇ 13ರಂದು ದಬ್ಬಣಗದ್ದೆ ಹಾಗೂ ಮುಂಡುವಳ್ಳಿ ಕ್ವಾರಿ ಪ್ರದೇಶಕ್ಕೆ ಭೇಟಿ ನೀಡಿ ಮರು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭ ಉಪವಿಭಾಗಾಧಿಕಾರಿ (Assistant Commissioner) ಸತ್ಯನಾರಾಯಣ್, ಕಿರಿಯ ಭೂ ವಿಜ್ಞಾನಿ ಪ್ರವೀಣ್, ರಾಜ್ಯ ಬಿಜೆಪಿ ಮುಖಂಡ ಬೇಗುವಳ್ಳಿ ಸತೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಉಪಾಧ್ಯಕ್ಷ ಬೇಗುವಳ್ಳಿ ಕವಿರಾಜ್ ಮತ್ತಿತರರು ಹಾಜರಿದ್ದರು.
