ಸಾಗರ: ಅವಿನಹಳ್ಳಿ ಹೋಬಳಿಯ ಕಾಗೆಹಳ್ಳ ಗ್ರಾಮದ ಸಮೀಪ ಇಂದು ಮಧ್ಯಾಹ್ನ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಯುವಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಹೇಗಾಯ್ತು ಘಟನೆ?
ಅವಿನಹಳ್ಳಿ ಹೋಬಳಿಯ ಕುಂಬಾರಗೊಳ್ಳಿ ಗ್ರಾಮದ ನಿವಾಸಿ ಪ್ರೇಮ್ ಕುಮಾರ್ (25) ಮೃತ ದುರ್ದೈವಿ. ವೆಲ್ಡಿಂಗ್ ಕೆಲಸ (Welding Work) ಮಾಡಿಕೊಂಡಿದ್ದ ಪ್ರೇಮ್ ಕುಮಾರ್, ಶುಕ್ರವಾರ ಮಧ್ಯಾಹ್ನ ಸಾಗರ ನಗರದಲ್ಲಿ ಕೆಲಸ ಮುಗಿಸಿ ತಮ್ಮೂರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.

ಕಾಗೆಹಳ್ಳದ ಸಮೀಪ ಎದುರಿನಿಂದ ಬಂದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪ್ರೇಮ್ ಕುಮಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.