KSRTC ನೌಕರರ ಮುಷ್ಕರ, ಶಿವಮೊಗ್ಗದಲ್ಲಿಯು ಜನರಿಗೆ ತಟ್ಟಲಿದೆ ಹೋರಾಟದ ಬಿಸಿ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಾಲ್ಕೂ ನಿಗಮಗಳ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದನ್ನು ಖಂಡಿಸಿ, ಮೇ 20 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ಫೆಡರೇಷನ್‌ ರಾಜ್ಯ ಉಪಾಧ್ಯಕ್ಷ ಎಂ.ಮಹಾದೇವ ತಿಳಿಸಿದರು.

ಸೋಮವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾದೇವ, ಸರ್ಕಾರದ ಐದು ಮುಖ್ಯ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಹಗಲಿರುಳು ಶ್ರಮಿಸಿ ಯಶಸ್ವಿಗೊಳಿಸಿದ ಸಾರಿಗೆ ನೌಕರರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

KSRTC-workers-to-go-on-strike-in-Shimoga.

ಏಕಪಕ್ಷೀಯ ತೀರ್ಮಾನಕ್ಕೆ ವಿರೋಧ

ಏಪ್ರಿಲ್ 29 ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೇಕಡಾ 7 ರಷ್ಟು ವೇತನ ಹೆಚ್ಚಳದ ಪ್ರಸ್ತಾಪ ಮಾಡಲಾಗಿತ್ತು. ತದನಂತರ ಮೇ 12 ರಂದು ಸರ್ಕಾರ ಏಕಪಕ್ಷೀಯವಾಗಿ ಶೇಕಡಾ 12.5 ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಜಂಟಿ ಕ್ರಿಯಾ ಸಮಿತಿಯು ಶೇಕಡಾ 25 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದೆ ಎಂದು ಮಹಾದೇವ ತಿಳಿಸಿದರು.

ಸರ್ಕಾರದ ಈ ಏಕಪಕ್ಷೀಯ ಮತ್ತು ತಾರತಮ್ಯದ ಆದೇಶವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯಬೇಕಾದ ಕೈಗಾರಿಕಾ ಒಪ್ಪಂದವನ್ನು 15 ತಿಂಗಳು ಕಾಲ ವಿಳಂಬ ಮಾಡಿ ನೌಕರರಿಗೆ ಅನ್ಯಾಯ ಎಸಗಲಾಗಿದೆ ಎಂದು ದೂರಿದರು.

ನೌಕರರ ಬೇಡಿಕೆಗಳು ಏನೇನು?

  • 2024ರ ಜನವರಿ 1ರಿಂದ ಅನ್ವಯವಾಗುವಂತೆ ಶೇಕಡಾ 25 ರಷ್ಟು ವೇತನ ಹೆಚ್ಚಳದೊಂದಿಗೆ 4 ವರ್ಷಗಳ ಅವಧಿಗೆ ವೇತನ ಪರಿಷ್ಕರಣೆ ಮಾಡಬೇಕು.
  • 2020ರ ಜನವರಿ 1 ರಿಂದ 2023ರ ಫೆಬ್ರವರಿ 28ರವರೆಗಿನ ಶೇಕಡಾ 15 ರಷ್ಟು ವೇತನ ಹೆಚ್ಚಳದ ಸಂಪೂರ್ಣ ಹಿಂಬಾಕಿ ಹಣವನ್ನು ನೀಡಬೇಕು ಸೇರಿದಂತೆ 7ಕ್ಕು ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.

ಮುಷ್ಕರದ ದಿನ ನೌಕರರು ರಸ್ತೆ ತಡೆ ಅಥವಾ ಪ್ರತಿಭಟನೆ ನಡೆಸುವುದಿಲ್ಲ. ಸ್ವಯಂಪ್ರೇರಿತರಾಗಿ ತಮ್ಮ ಮನೆಗಳಲ್ಲೇ ಉಳಿಯಲಿದ್ದಾರೆ. ಬಸ್‌ಗಳು ಡಿಪೋಗಳಿಂದ ಹೊರಬರುವುದಿಲ್ಲ. ಮುಷ್ಕರಕ್ಕೆ ಮುನ್ನ ಮೇ 19 ರಂದು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶದ ಸಂದರ್ಭ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು.

ಎಂ.ಮಹಾದೇವ, ಫೆಡರೇಷನ್‌ ರಾಜ್ಯ ಉಪಾಧ್ಯಕ್ಷ

ಸಿಐಟಿಯು ವಿಭಾಗ ಅಧ್ಯಕ್ಷ ರಾಜು ಚಿನ್ನಸ್ವಾಮಿ ಸೇರಿ ಸಂಘಟನೆಯ ಪದಾಧಿಕಾರಿಗಳು, ಸಾರಿಗೆ ನೌಕರರು ಸುದ್ದಿಗೋಷ್ಠಿಯಲ್ಲಿದ್ದರು.

ಹೆಚ್ಚಿನ Shimoga News, Shivamogga News ಮತ್ತು TRAIN / BUS TIMINGS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 18, 2026