ಶಿವಮೊಗ್ಗ: ಆನ್‌ಲೈನ್ ಹೂಡಿಕೆ (Online Investment) ಹೆಸರಿನಲ್ಲಿ ಲಿಂಕ್ ಕಳುಹಿಸಿ ಅಧಿಕ ಲಾಭದ ಆಮಿಷ ಒಡ್ಡಿ ವಂಚನೆ ಮಾಡಲಾಗಿದೆ. ಲಾಭದ ಆಸೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕುಟುಂಬವೊಂದು ₹33.14 ಲಕ್ಷ ಕಳೆದುಕೊಂಡಿದ್ದಾರೆ.
ಅಪರಿಚಿತರು ವಾಟ್ಸಾಪ್ ಮೂಲಕ ವ್ಯಕ್ತಿಯೊಬ್ಬರ ಮೊಬೈಲ್‌ಗೆ ಮೆಸೇಜ್ ಕಳುಹಿಸಿದ್ದರು. ತಾವು ಕಂಪನಿಯೊಂದರ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡಿದ್ದರು. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ (High Returns) ನೀಡುವುದಾಗಿ ನಂಬಿಸಿದ್ದರು. ನಂತರ ವೆರಿಫಿಕೇಷನ್, ಪ್ರೋಸೆಸ್ ಚಾರ್ಜಸ್, ಸರ್ವೀಸ್ ಚಾರ್ಜಸ್ ಹಾಗೂ ಟ್ಯಾಕ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದರು. ಇವರ ಮಾತು ನಂಬಿ ವ್ಯಕ್ತಿಯ ಕುಟುಂಬದ ಸದಸ್ಯರು ದೊಡ್ಡ ಮೊತ್ತದ ಹಣ ವರ್ಗಾಯಿಸಿದ್ದರು.

ವ್ಯಕ್ತಿ, ಅವರ ತಮ್ಮ, ತಂದೆ ಹಾಗೂ ತಾಯಿಯ ಒಟ್ಟು 11 ಬ್ಯಾಂಕ್ ಖಾತೆಗಳನ್ನು ಬಳಸಲಾಗಿದೆ. ಇವುಗಳ ಮೂಲಕ ಒಟ್ಟು ₹33,14,600 ಹಣ ಅಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹಣ ಪಡೆದ ಬಳಿಕ ಯಾವುದೇ ಲಾಭಾಂಶ ನೀಡಿಲ್ಲ. ಪುನಃ ಹಣ ಹೂಡಿಕೆ ಮಾಡುವಂತೆ ಕೇಳಿದಾಗ ಕುಟುಂಬ ಸದಸ್ಯರಿಗೆ ಆನ್‌ಲೈನ್ ವಂಚನೆಯ (Cyber Fraud) ಅನುಮಾನ ಬಂದಿದೆ. ಶಿವಮೊಗ್ಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
