ಶಿಕಾರಿಪುರದಲ್ಲಿ ಬೀದಿಗಿಳಿದ ರೈತರು, ಸರ್ಕಾರದ ವಿರುದ್ಧ ವಿಜಯೇಂದ್ರ, ರಾಘವೇಂದ್ರ ಗರಂ, ಕಾರಣವೇನು?

ಶಿಕಾರಿಪುರ: ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿದ್ದು ಹಾಗೂ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದು ದೊಡ್ಡ ದಾಖಲೆಯಲ್ಲ. ಮುಖ್ಯಮಂತ್ರಿಯಾದವರು ನಾಡಿನ ಜನತೆಯ ಸೇವೆ ಸಲ್ಲಿಸುವ ಅವಕಾಶ ದೊರೆತಾಗ ರೈತರು ಮತ್ತು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ, ಅವರ ಕಣ್ಣೀರು ಒರೆಸಿದರೆ ಮಾತ್ರ ಇತಿಹಾಸದಲ್ಲಿ ದಾಖಲಾಗಲು ಸಾಧ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ತಾಲ್ಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ರೈತರ ಪಾಲಿಗೆ ಸತ್ತಂತಾಗಿದೆ ಎಂದು ಅವರು ಟೀಕಿಸಿದರು.

MP-BY-Raghavendra-speaks-at-Farmers-protest-in-Shikaripura

“ಗಾಳಿ ಮಳೆಗೆ ಲಕ್ಷಾಂತರ ಅಡಿಕೆ ಮರ ಧರೆಗುರುಳಿದರೂ ಸೂಕ್ತ ಪರಿಹಾರ ನೀಡದೆ, ಸಿಎಂ ಮತ್ತು ಸಚಿವರು ದೆಹಲಿಗೆ ತೆರಳಿ ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿದ್ದಾರೆ. ಕುರ್ಚಿಗಾಗಿ ಹೋರಾಡುತ್ತಿರುವ ಸಿಎಂ ರೈತರ ಕಣ್ಣೀರು ಒರೆಸಲು ಸಾಧ್ಯವಾಗಿಲ್ಲ ಎಂಬುದನ್ನು ಅರಿತುಕೊಳ್ಳದಿದ್ದರೆ ತಕ್ಷಣವೇ ರಾಜೀನಾಮೆ ನೀಡಬೇಕು. ಈ ಪ್ರತಿಭಟನೆ ಕೇವಲ ಸಾಂಕೇತಿಕವಾಗಿದ್ದು, ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.”

– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಅಧ್ಯಕ್ಷ

“ತಾಲೂಕಿನಾದ್ಯಂತ ಶಾಶ್ವತ ನೀರಾವರಿ ಕಲ್ಪಿಸಲಾಗಿದೆ. ಆದರೆ ಸರ್ಕಾರಕ್ಕೆ ವಿದ್ಯುತ್ ಬಿಲ್ ಪಾವತಿಸಲಾಗುತ್ತಿಲ್ಲ. ರೈತರು ಮೆಕ್ಕೆ ಜೋಳವನ್ನು ಮಾರಾಟ ಮಾಡಿದ ಬಳಿಕ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿತು. ಅಧಿಕಾರದಲ್ಲಿದ್ದಾಗ ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂಬ ಸತ್ಯ ನೆನಪಿರಲಿ”

– ಬಿ.ವೈ. ರಾಘವೇಂದ್ರ. ಸಂಸದ

ಪ್ರತಿಭಟನೆಯ ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಪ್ರಮುಖರಾದ ಗುರುಮೂರ್ತಿ, ಚನ್ನವೀರಪ್ಪ, ವಸಂತಗೌಡ, ಮಹೇಶ್ ಹುಲ್ಮಾರ್‌ ಸೇರಿ ಹಲವರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp