THIRTHAHALLI NEWS: ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಕತ್ತರಿಸಿ, ₹2 ಲಕ್ಷ ಮೌಲ್ಯದ ಚಿನ್ನದ ಮುತ್ತಿನ ಸರವನ್ನು ಕಳವು ಮಾಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕೈಮರ ಜಂಕ್ಷನ್ ಬಳಿ ನಡೆದಿದೆ. ಕಟಗಾರು ಗ್ರಾಮದ ಪ್ರೇಮಾ ಭೋಜರಾಜ್ ಚಿನ್ನದ ಸರ ಕಳೆದುಕೊಂಡ ಮಹಿಳೆ.
ಪ್ರೇಮಾ ಅವರು ಮೇ 12ರಂದು ತೀರ್ಥಹಳ್ಳಿ ಬಸ್ ನಿಲ್ದಾಣದಿಂದ ಮೂಡಬಿದಿರೆಯ ತವರು ಮನೆಗೆ ಹೋಗಲು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ದರು. ಬಸ್‌ನಲ್ಲಿ ಸೀಟ್ ಇಲ್ಲದ ಕಾರಣ ನಿಂತಿದ್ದಾಗ, ಇಬ್ಬರು ಅಪರಿಚಿತ ಮಹಿಳೆಯರು ತಮ್ಮ ಸೀಟಿನಲ್ಲೇ ಜಾಗ ಮಾಡಿ ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಆ ಮಹಿಳೆಯರು, ‘ನಿಮ್ಮ ಸರ ತುಂಡಾಗಿದೆ, ಬ್ಯಾಗಿನಲ್ಲಿ ಎತ್ತಿಟ್ಟುಕೊಳ್ಳಿ’ ಎಂದು ಹೇಳಿದ್ದರು. ಅದರಂತೆ ಪ್ರೇಮಾ ಅವರು 56 ಗ್ರಾಂ ತೂಕದ ಲಕ್ಷ್ಮೀ ಪೆಂಡೆಂಟ್ ಇದ್ದ ಚಿನ್ನದ ಮುತ್ತಿನ ಸರವನ್ನು ಕುತ್ತಿಗೆಯಿಂದ ತೆಗೆದು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಬಳಿಕ ಲಕ್ಷ್ಮಿ ಅವರು ಬಸ್‌ನಲ್ಲಿ ನಿದ್ರೆಗೆ ಜಾರಿದ್ದರು.

ಬಸ್ಸು ಕೈಮರ ಜಂಕ್ಷನ್ ತಲುಪಿದಾಗ ಎಚ್ಚರಗೊಂಡಿದ್ದಾರೆ. ಈ ವೇಳೆ ವ್ಯಾನಿಟಿ ಬ್ಯಾಗ್‌ನ ಒಂದು ಬದಿ ಕತ್ತರಿಸಿ ಜಿಪ್ ತೆಗೆದು ಒಳಗಿದ್ದ ಚಿನ್ನದ ಸರ ಕಳವು ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
