ಶಿವಮೊಗ್ಗ ಜಿಲ್ಲೆಯ 5 ತಾಲೂಕಿನ 25 ಕಡೆಗಳಲ್ಲಿ ಲೋಕಾಯುಕ್ತ ದಾಳಿ, ಎಲ್ಲೆಲ್ಲಿ ರೇಡ್‌ ಆಗಿದೆ? ಕಾರಣವೇನು?

ಶಿವಮೊಗ್ಗ: ಜಿಲ್ಲೆಯ 25 ಕಡೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 52 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗಣಿ ಇಲಾಖೆಯ ಕಚೇರಿಯಿಂದ ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಎಲ್ಲೆಲ್ಲಿ ದಾಳಿಯಾಗಿದೆ?

ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ವಿವಿಧ ನದಿ ಪಾತ್ರಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಅಡ್ಡೆಗಳ ಮೇಲೆ ಇಂದು ದಾಳಿ ನಡೆಸಲಾಗಿದೆ. ತುಂಗಭದ್ರಾ ಹಾಗೂ ಶರಾವತಿ ನದಿ ಪಾತ್ರಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಕುರಿತು ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

Lokayukta-Raid-on-mines-and-geology-department.

15 ತಂಡದಿಂದ ದಾಳಿ

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ 15 ಹಿರಿಯ ಅಧಿಕಾರಿಗಳ ತಂಡಗಳು ಜಿಲ್ಲೆಯ ಒಟ್ಟು 25 ವಿವಿಧ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ. ದಾಳಿಯ ವೇಳೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 17,000 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆಯಲಾಗಿದೆ. ಗಣಿಗಾರಿಕೆಗೆ ಬಳಸುತ್ತಿದ್ದ ಜೆಸಿಬಿ, ಹಿಟಾಚಿ, ಟಿಪ್ಪರ್ ಲಾರಿ, ಟ್ರ್ಯಾಕ್ಟರ್ ಹಾಗೂ ಬೋಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಕಚೇರಿ ಮೇಲೆ ರೇಡ್‌, ದಾಖಲೆ ವಶಕ್ಕೆ

ಇನ್ನು, ಶಿವಮೊಗ್ಗದ ಕುವೆಂಪು ನಗರದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಕಾರಿಗಳು ದಾಳಿ ನಡೆಸಿದ್ದರು. ಪ್ರಮುಖ ದಾಖಲೆಗಳನ್ನು ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾಳಿಯಲ್ಲಿ ಲೋಕಾಯುಕ್ತ ಘಟಕಗಳ ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp