POLITICAL NEWS: ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಮಯ ನಿಗದಿ ಆಗಿದೆ. ಈಗ ಅವರ ಸಂಪುಟ ಸೇರಲು ಶಾಸಕರಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯ ಶಾಸಕರು ಕೂಡ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಯ ಕೋಟಾದಲ್ಲಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೊದಲ ಮೂರು ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ಮಧು ಬಂಗಾರಪ್ಪ ಅವರು ಕ್ಯಾಬಿಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈಗ ಸರ್ಕಾರದ ಅವಧಿ ಇನ್ನು ಎರಡು ವರ್ಷ ಮಾತ್ರ ಬಾಕಿ ಇದೆ. ಹಾಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಶಿವಮೊಗ್ಗದ ನಾಲ್ವರ ಪೈಕಿ ಯಾರಿಗೆ ಸಚಿವ ಸ್ಥಾನ ದಕ್ಕಲಿದೆ ಎಂಬುದು ಸದ್ಯದ ಕುತೂಹಲ.

ಬೆಂಗಳೂರಿನಲ್ಲಿ ಬೀಡು ಬಿಟ್ಟ ಶಾಸಕರು
ಡಿ.ಕೆ.ಶಿವಕುಮಾರ್ ಅವರ ಕ್ಯಾಬಿನೆಟ್ ಸೇರಲು ಶಿವಮೊಗ್ಗ ಜಿಲ್ಲೆಯ ನಾಲ್ವರು ಶಾಸಕರು ಅರ್ಹರಿದ್ದಾರೆ. ಸೊರಬ ಶಾಸಕ ಮಧು ಬಂಗಾರಪ್ಪ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಅವರ ಪೈಕಿ ಯಾರಾದರೊಬ್ಬರು ಸಂಪುಟ ಸೇರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ಲಾಬಿ ಆರಂಭಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ, ಪೋಸ್ಟರ್ ವಾರ್
ಸಚಿವರಾಗಿದ್ದ ಮಧು ಬಂಗಾರಪ್ಪ ಅವರು ಪುನಃ ಸಂಪುಟ ಸೇರಬಹುದು ಎಂಬ ಚರ್ಚೆ ಜೋರಿದೆ. ಹಿರಿತನದ ಆಧಾರದಲ್ಲಿ ಬಿ.ಕೆ.ಸಂಗಮೇಶ್ವರ್ ಮಿನಿಸ್ಟರ್ ಆಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಇನ್ನೊಂದೆಡೆ ಸಚಿವರಾಗಬೇಕು ಎಂಬ ಗುರಿಯೊಂದಿಗೆ ಬೇಳೂರು ಗೋಪಾಲಕೃಷ್ಣ ಅವರು ದೆಹಲಿ ತನಕ ಹೋಗಿ ಬಂದಿದ್ದಾರೆ. ಹಾಗಾಗಿ ಅವರು ಬೇಳೂರು ಗೋಪಾಲಕೃಷ್ಣ ಸಚಿರಾಗಿಯೇ ಮರಳುತ್ತಾರೆ ಎಂದು ಅವರ ಬೆಂಬಲಿಗರು ಆಸೆಯಲ್ಲಿದ್ದಾರೆ. ಇನ್ನೊಂದೆಡೆ, ಶಾಸಕರುಗಳ ಬೆಂಬಲಿಗರು ಪ್ರತಿಭಟನೆಗಳನ್ನು ನಡೆಸುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವಾರ್‌ಗಳನ್ನು ಆರಂಭಿಸಿದ್ದಾರೆ.

