ಶಿವಮೊಗ್ಗ: ರಾಜ್ಯ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 5 ಸಚಿವ ಸ್ಥಾನಗಳನ್ನು ನೀಡಬೇಕು ಹಾಗೂ ಶಿವಮೊಗ್ಗ ಜಿಲ್ಲೆಯ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಸೇರಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ಒದಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ ಅಡ್ಡು ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ಕಾರವಾರ, ಉಡುಪಿ ಹಾಗೂ ಚಿತ್ರದುರ್ಗ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬರೂ ಶಾಸಕರು ಇಲ್ಲ. ಮುಸ್ಲಿಮರು ಯಾವಾಗಲೂ ಕಾಂಗ್ರೆಸ್ ಜೊತೆಯೇ ಇರುತ್ತಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ಅಲ್ಪಸಂಖ್ಯಾತರ ಪರ ಆಡಳಿತ ನಡೆಸಿದ್ದರು, ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಅದನ್ನೇ ಮುಂದುವರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಸೈಯದ್ ವಾಹಿದ್ ಬೇಡಿಕೆಗಳೇನು?
- ಸಂಪುಟದಲ್ಲಿ ಮುಸ್ಲಿಂ ಸಮುದಾಯದ ನಾಲ್ವರಿಗೆ ಹಾಗೂ ಕ್ರೈಸ್ತ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಬೇಕು.
- ಅಲ್ಪಸಂಖ್ಯಾತ ಮಹಿಳೆಯರ ರಾಜಕೀಯ ಸಬಲೀಕರಣ ಮತ್ತು ಪಕ್ಷದ ಸಂಘಟನೆಯ ದೃಷ್ಟಿಯಿಂದ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಅವರಿಗೆ ಸಚಿವ ಸ್ಥಾನ ನೀಡಬೇಕು. ಮಲೆನಾಡು ಭಾಗದ ಮಹಿಳಾ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ಧ್ವನಿಯಾಗಿ ಅವರಿಗೆ ಅವಕಾಶ ನೀಡುವುದು ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಲಿದೆ.
- ಶಿವಮೊಗ್ಗ ಜಿಲ್ಲೆಯ ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್ ಹಾಗೂ ಬೇಳೂರು ಗೋಪಾಲಕೃಷ್ಣ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ, ಶಿವಮೊಗ್ಗ ಜಿಲ್ಲೆಗೆ ಕನಿಷ್ಠ 2 ಸಚಿವ ಸ್ಥಾನಗಳನ್ನು ನೀಡಬೇಕು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್, ಪ್ರಮುಖರಾದ ಜಾನ್ ಡಿಸೋಜಾ, ಸ್ಟೆಲ್ಲಾ ಮಾರ್ಟಿನ್, ಶಮೀಮ್ ಬಾನು, ಸೈಯದ್ ಶಫಿವುಲ್ಲಾ, ಸೈಯದ್ ಜಮೀಲ್, ಜಫ್ರುಲ್ಲಾ, ಸುರಯ್ಯ ಬೇಗಮ್, ಸಮೀನಾ ಹಾಗೂ ಮಹಿಳಾ ಘಟಕ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
