ಶಿವಮೊಗ್ಗದಲ್ಲಿ SIR ಶುರು, ಮನೆ ಮನೆಗೆ ಭೇಟಿ ನೀಡ್ತಾರೆ BLO, ಯಾವಾಗ? ಏನೆಲ್ಲ ದಾಖಲೆ ಬೇಕು?

ಶಿವಮೊಗ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ಆರಂಭವಾಗಲಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ) ಜೂನ್ 30 ರಿಂದ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಮತದಾರನೂ ಮತದಾನದಿಂದ ವಂಚಿತನಾಗಬಾರದು ಮತ್ತು ನಕಲಿ ಹೆಸರುಗಳು ಪಟ್ಟಿಯಲ್ಲಿ ಇರಬಾರದು ಎಂಬ ಉದ್ದೇಶದಿಂದ ಈ ಮತದಾರರ ಪಟ್ಟಿಯ ಮಹಾ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Shimoga-DC-Prabhulinga-Kavlikatti-and-ADC-Abhishek-press-meet-about-SIR

ಮನೆಗೆ ಮನೆಗೆ ಬರ್ತಾರೆ ಬಿ.ಎಲ್‌.ಓ

ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ) ಪ್ರತಿ ಮನೆಗೆ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಮೊದಲ ಭೇಟಿಯಲ್ಲಿ ಪ್ರತಿ ಮನೆಗೂ ಗಣತಿ ನಮೂನೆ ವಿತರಿಸಲಿದ್ದಾರೆ. ಎರಡನೇ ಭೇಟಿಯಲ್ಲಿ ಭರ್ತಿ ಮಾಡಿದ ನಮೂನೆ ಸಂಗ್ರಹಿಸಲಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರೂ ಕಡ್ಡಾಯವಾಗಿ ಹೊಸ ಗಣತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ನಮೂನೆ ಸಲ್ಲಿಸದಿದ್ದರೆ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದರು.

ಏನೆಲ್ಲ ದಾಖಲೆಗಳು ಬೇಕು?

ಗಣತಿ ನಮೂನೆಯ ಜೊತೆಗೆ ಯಾವುದಾದರೂ ಒಂದು ಸ್ವಯಂ ದೃಢೀಕೃತ ದಾಖಲೆ ಸಲ್ಲಿಸಬೇಕಾಗುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ಉದ್ಯಮಗಳ ನಿಯಮಿತ ಉದ್ಯೋಗಿ, ಪಿಂಚಣಿದಾರರಿಗೆ ನೀಡಲಾದ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ. ಜುಲೈ 1, 1987 ಕ್ಕಿಂತ ಮೊದಲು ಭಾರತದಲ್ಲಿ ಸರ್ಕಾರಿ, ಸ್ಥಳೀಯ ಪ್ರಾಧಿಕಾರಗಳು, ಬ್ಯಾಂಕ್‌ಗಳು, ಅಂಚೆ ಕಚೇರಿ,ಎಲ್‌ಐಸಿ, ಸಾರ್ವಜನಿಕ ಉದ್ಯಮಗಳಿಂದ ನೀಡಲಾದ ಯಾವುದೇ ಗುರುತಿನ ಚೀಟಿ ಅಥವಾ ಪ್ರಮಾಣಪತ್ರ ಅಥವಾ ದಾಖಲೆ ಒದಗಿಸಬೇಕು ಎಂದರು.  

Kalleshwara-Enterprises.webp

ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರ. ಪಾಸ್‌ಪೋರ್ಟ್. ಅಂಗೀಕೃತ ಮಂಡಳಿಗಳು/ವಿಶ್ವವಿದ್ಯಾಲಯಗಳಿಂದ ನೀಡಲಾದ ಮೆಟ್ರಿಕ್ಯುಲೇಶನ್ ಅಥವಾ ಶೈಕ್ಷಣಿಕ ಪ್ರಮಾಣ ಪತ್ರ. ಸಕ್ಷಮ ರಾಜ್ಯ ಪ್ರಾಧಿಕಾರದಿಂದ ನೀಡಲಾದ ಶಾಶ್ವತ ನಿವಾಸ ಪ್ರಮಾಣ ಪತ್ರ. ಅರಣ್ಯಹಕ್ಕು ಪ್ರಮಾಣ ಪತ್ರ. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ, ಎಸ್‌ಸಿ, ಎಸ್‌ಟಿ ಅಥವಾ ಯಾವುದೇ ಜಾತಿ ಪ್ರಮಾಣಪತ್ರ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ರಾಷ್ಟ್ರೀಯ ನಾಗರಿಕರ ನೋಂದಣಿ. ರಾಜ್ಯ ಅಥವಾ ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ನೋಂದಣಿ. ಸರ್ಕಾರದಿಂದ ಯಾವುದೇ ಭೂಮಿ ಅಥವಾ ಮನೆ ಹಂಚಿಕೆ ಪ್ರಮಾಣಪತ್ರ ಒದಗಿಸಬಹುದು. ಇನ್ನು, ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದು, ಪೌರತ್ವದ ಪುರಾವೆಯಾಗಿ ಅಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

“ಮತದಾರರ ಅನುಕೂಲಕ್ಕಾಗಿ ಗ್ರಾಮ ಪಂಚಾಯತ್, ನಾಡ ಕಚೇರಿ, ತಾಲ್ಲೂಕು ಕಚೇರಿ ಹಾಗೂ ವಾರ್ಡ್ ಕಚೇರಿ ಸೇರಿದಂತೆ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಬಿ.ಎಲ್.ಓ ಫೆಸಿಲಿಟೇಶನ್ ಸೆಂಟರ್‌ಗಳನ್ನು ಸ್ಥಾಪಿಸಿ, ಪರಿಷ್ಕರಣೆ ಕಾರ್ಯ ಸುಗಮವಾಗಿ ನಡೆಯಲು ಕ್ರಮವಹಿಸಲಾಗುವುದು.”

– ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ

SIR ವೇಳಾ ಪಟ್ಟಿ ಹೇಗಿರುತ್ತೆ?

  • ಜೂನ್ 20 ರಿಂದ ಜೂನ್ 29, 2026: ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯಗಳು ನಡೆಯಲಿವೆ.
  • ಜೂನ್ 30 ರಿಂದ ಜುಲೈ 29: ಬೂತ್ ಮಟ್ಟದ ಅಧಿಕಾರಿಗಳಿಂದ (ಬಿ.ಎಲ್.ಓ) ಕಡ್ಡಾಯವಾಗಿ ಮನೆ-ಮನೆ ಭೇಟಿ ಮತ್ತು ಪರಿಶೀಲನೆ.
  • ಜುಲೈ 29ರ ಒಳಗೆ: ಮತಗಟ್ಟೆಗಳ ಮರು ಸಂಘಟನೆ ಪ್ರಕ್ರಿಯೆ ಪೂರ್ಣ.
  • ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ.
  • ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಕರಡು ಪಟ್ಟಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ.
  • ಆಗಸ್ಟ್ 5 ರಿಂದ ಅಕ್ಟೋಬರ್ 3: ಆಕ್ಷೇಪಣೆಗಳ ನೋಟಿಸ್ ಹಂತ ಹಾಗೂ ಸಲ್ಲಿಕೆಯಾದ ದೂರು, ಆಕ್ಷೇಪಣೆಗಳ ಇತ್ಯರ್ಥ ಪ್ರಕ್ರಿಯೆ.
  • ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿಯ ಅಧಿಕೃತ ಪ್ರಕಟಣೆ

“ರಾಜಕೀಯ ಪಕ್ಷಗಳಿಂದ ಬೂತ್‌ ಮಟ್ಟದ ಏಜೆಂಟ್‌ಗಳನ್ನು ಇರುತ್ತಾರೆ. ಅವರು ಮನೆ-ಮನೆ ಪರಿಷ್ಕರಣೆ ವೇಳೆ ಬಿ.ಎಲ್.ಓಗಳಿಗೆ ಸಹಾಯ ಮಾಡಬೇಕು. ಮೃತಪಟ್ಟ, ವಲಸೆ ಹೋದ ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ದಾಖಲೆ ಒದಗಿಸಲು ನೆರವಾಗಬೇಕು. ಹೊಸ ಹೆಸರು ಸೇರ್ಪಡೆಗೆ ಫಾರ್ಮ್ 6, ಹೆಸರು ತೆಗೆದುಹಾಕಲು ಫಾರ್ಮ್ 7 ಮತ್ತು ತಿದ್ದುಪಡಿಗಾಗಿ ಫಾರ್ಮ್ 8 ಅರ್ಜಿ ಸಲ್ಲಿಸಲು ಮತದಾರರಿಗೆ ಮಾರ್ಗದರ್ಶನ ನೀಡಬೇಕು.”

ಅಭಿಷೇಕ್‌, ಅಪರ ಜಿಲ್ಲಾಧಿಕಾರಿ

ಸುದ್ದಿಗೋಷ್ಠಿಗು ಮೊದಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲಾಯಿತು. ಈ ವೇಳೆ SIR ಕುರಿತ ಗೊಂದಲಗಳನ್ನು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಪರಿಹರಿಸಿದರು. ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರಮುಖರಾದ ಮಾಲತೇಶ್‌, ಜಗದೀಶ್‌, ಶಿವಾನಂದ್‌, ದೇವರಾಜ್‌, ಎಸ್.ಕೆ.ಪ್ರಭು, ಷಣ್ಮುಖಪ್ಪ, ಎಂ.ನಾರಾಯಣ್‌, ದೀಪಕ್‌ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp