ಶಿವಮೊಗ್ಗ: ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದೆ. ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಶಿವಮೊಗ್ಗ ನಗರದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಉಚಿತ ಬಸ್ ಪಾಸ್ ಯೋಜನೆಯ ಘೋಷಣೆಯಾಗುತ್ತಿದ್ದಂತೆ ನಗರದ ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಯುಐ (NSUI) ಸಂಘಟನೆಯ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ನಗರದ ಮೀನಾಕ್ಷಿ ಭವನದ ಎದುರಿಗಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಂಭ್ರಮ ನಡೆಸಿದರು.

ಸಿಹಿ ಹಂಚಿ ಸಂಭ್ರಮಾಚರಣೆ
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು. ಗ್ರಾಮೀಣ ಭಾಗದಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದ ಈ ಉಚಿತ ಪಾಸ್ ಯೋಜನೆ ದೊಡ್ಡ ಆಸರೆಯಾಗಲಿದೆ. ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ ಎಂದು ಈ ವೇಳೆ ವಿಜಯ್ ಕುಮಾರ್ ತಿಳಿಸಿದರು.
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಹೊರಬಿದ್ದ ಮೊದಲ ಪ್ರಮುಖ ಆದೇಶ ಇದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಡಿ.ಕೆ.ಶಿವಕುಮಾರ್ ಅವರ ಫೋಟೊ ಹಿಡಿದು ಸಂಭ್ರಮಿಸಿದರು. ಕೆಳಗಿದೆ ಸಂಭ್ರಮಾಚರಣೆ ವಿಡಿಯೋ..
ಸಂಭ್ರಮಾಚರಣೆಯಲ್ಲಿ ಎನ್‌ಎಸ್‌ಯುಐ ನಗರ ಅದ್ಯಕ್ಷ ರವಿ, ನಗರ ಉಪಾಧ್ಯಕ್ಷ ಅಬ್ದುಲ್ ಸುಭಾನ್, ಆದಿತ್ಯ, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಾಜಿ ರಾವ್, ವರುಣ್ ಹಾಗೂ ಯುಸೂಪ್ ಟೊಪಿಕ್, ಶ್ರೀಕಾಂತ್, ಹಾಲಸ್ವಾಮಿ, ಮಹಾದೇವ ಹಿರೇಮಠ, ಜೀವಿತ್, ಶಶಿಕಲಾ, ಸೃಜನ್, ದೀಪಕ್, ಅಭಿಲಾಷ್, ಲೋಹಿತ್, ಚೇತನ್, ಅನಿರುದ್ಧ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
