ಶಿವಮೊಗ್ಗ: ಕೇಂದ್ರ ಸರ್ಕಾರದ ಉಡಾನ್ (UDAN) ಯೋಜನೆಯಡಿ ಶಿವಮೊಗ್ಗ–ಬೆಂಗಳೂರು ಮಾರ್ಗವನ್ನು ಸೇರ್ಪಡೆಗೊಳಿಸಿ, ವಿಮಾನ ಯಾನವನ್ನು ಮರು ಆರಂಭಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ವಿನೋಬನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ರಾಜ್ಯ ಸರ್ಕಾರವು ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರು-ಶಿವಮೊಗ್ಗ ವಿಮಾನ ಸೇವೆ ರದ್ದಾಗಲು ಪ್ರಮುಖ ಕಾರಣ. ಆದಾಗ್ಯೂ, ಈ ಮಾರ್ಗವನ್ನು ಉಡಾನ್ ಯೋಜನೆಗೆ ಒಳಪಡಿಸಿ ಶೀಘ್ರದಲ್ಲೇ ವಿಮಾನ ಹಾರಾಟ ಪುನಾರಂಭ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ವಿಜಿಎಫ್ ಸಬ್ಸಿಡಿ ನಿಲ್ಲಿಸಿದ್ದೇ ಕಾರಣ
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಉತ್ತೇಜನ ನೀಡಲು ವಿಜಿಎಫ್ (ವಯಬಿಲಿಟಿ ಗ್ಯಾಪ್ ಫಂಡ್) ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗಿನ ರಾಜ್ಯ ಸರ್ಕಾರವು ಈ ಸಬ್ಸಿಡಿಯನ್ನು ನಿಲ್ಲಿಸಿದೆ. ವಿಮಾನ ಸೇವೆಗೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ಕಡಿತಗೊಳಿಸಿ, ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೇಂದ್ರದ ಕಡೆಗೆ ಬೆರಳು ತೋರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗಕ್ಕೆ ಮಲತಾಯಿ ಧೋರಣೆ
ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಪುನಾರಂಭಕ್ಕೆ ₹20 ರಿಂದ ₹25 ಕೋಟಿವರೆಗೂ ಸಬ್ಸಿಡಿ ನೀಡಿರುವ ರಾಜ್ಯ ಸರ್ಕಾರ, ಶಿವಮೊಗ್ಗ ಜಿಲ್ಲೆಗೆ ಮಾತ್ರ ಈ ನಿಟ್ಟಿನಲ್ಲಿ ತಾರತಮ್ಯ ಎಸಗುತ್ತಿದೆ. ಸಬ್ಸಿಡಿ ಮುಂದುವರಿಸುವಂತೆ ಕೋರಿ ಸಚಿವ ಎಂ.ಬಿ. ಪಾಟೀಲ್ ಅವರಿಗೂ ಮನವಿ ಮಾಡಲಾಗಿತ್ತು ಎಂದು ರಾಘವೇಂದ್ರ ತಿಳಿಸಿದರು.
“ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಕಿತ್ತುಕೊಂಡು ರಾಜ್ಯ ಸರ್ಕಾರವು ಜವಾಬ್ದಾರಿಯನ್ನು ಕೇಂದ್ರಕ್ಕೆ ತಳ್ಳುವ ಕೆಲಸ ಮಾಡಿದೆ. ಶಿವಮೊಗ್ಗಕ್ಕೆ ಯಾಕೆ ಈ ರೀತಿ ಮಲತಾಯಿ ಧೋರಣೆ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ. ಆದರೂ ನಿರಾಶರಾಗದೆ ಕೇಂದ್ರದ ಉಡಾನ್ ಯೋಜನೆಯಡಿ ಆದಷ್ಟು ಬೇಗ ಬೆಂಗಳೂರು – ಶಿವಮೊಗ್ಗ ಮಾರ್ಗವನ್ನು ಸೇರಿಸಿ, ವಿಮಾನ ಸೇವೆ ಪುನಾರಂಭಿಸಲು ಗಮನ ಹರಿಸುತ್ತೇನೆ.”
– ಬಿ.ವೈ.ರಾಘವೇಂದ್ರ, ಸಂಸದ
