ಬೆಂಗಳೂರು: ಸದ್ಯದಲ್ಲೇ ನಡೆಯಲಿರುವ ಉಡಾನ್ ಯೋಜನೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬೆಂಗಳೂರು-ಶಿವಮೊಗ್ಗ ವಿಮಾನ ಮಾರ್ಗವನ್ನು ಸೇರಿಸಬೇಕು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಷ್ಟದ ಕಾರಣಕ್ಕಾಗಿ ಪ್ರಸ್ತುತ ಸ್ಥಗಿತಗೊಂಡಿರುವ ಈ ವಿಮಾನ ಸೇವೆಯನ್ನು ಪುನರಾರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಕೋರಿದ್ದಾರೆ.

ಸುತ್ತಮುತ್ತಲ ಜಿಲ್ಲೆಗಳಿಗೆ ಹಿನ್ನಡೆ
2023ರ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ್ದು, ಇಂಡಿಗೋ ಸಂಸ್ಥೆಯು ಬೆಂಗಳೂರು-ಶಿವಮೊಗ್ಗ ನಡುವೆ ಸೇವೆ ನೀಡುತ್ತಿತ್ತು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಈ ಸೇವೆ ಸ್ಥಗಿತಗೊಂಡಿರುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಆರ್ಥಿಕ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಬೆಳವಣಿಗೆಗೆ ಭಾರಿ ಹಿನ್ನಡೆಯಾಗಿದೆ ಎಂದು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ.

ಶಿವಮೊಗ್ಗ – ಬೆಂಗಳೂರು ಮಾರ್ಗ ಸೇರಿಸಿ
ಶಿವಮೊಗ್ಗದಿಂದ ಬೆಂಗಳೂರಿಗೆ ನೇರ ವಿಮಾನ ಸೇವೆ ಇಲ್ಲದ ಕಾರಣ ದೇಶ-ವಿದೇಶಗಳಿಗೆ ಪ್ರಯಾಣಿಸುವ ಜನರಿಗೆ ತೊಂದರೆಯಾಗಿದೆ. ಆದ್ದರಿಂದ ವಯಬಿಲಿಟಿ ಗ್ಯಾಪ್ ಫಂಡ್ (VGF) ನೆರವು ನೀಡುವ ಮೂಲಕ ಉದ್ದೇಶಿತ ಬಿಡ್ಡಿಂಗ್‌ನಲ್ಲಿ ಈ ಮಾರ್ಗವನ್ನು ಸೇರ್ಪಡೆ ಮಾಡಲು ಕೇಂದ್ರ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಶಿವಮೊಗ್ಗ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಲಭ್ಯವಿದೆ. ವಿಮಾನ ಸೇವೆ ಪುನರಾರಂಭವು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಪ್ರಗತಿಗೆ ನಿರ್ಣಾಯಕವಾಗಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.