ಮನವಿಗೆ ಸ್ಪಂದಿಸದ ಅಧಿಕಾರಿಗಳು; ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿದ ಯುವಕರು

ಹೊಸನಗರ: ತಾಲೂಕಿನ ಅರಳಿಕೊಪ್ಪ ಹಾಗೂ ಎಂ. ಗುಡ್ಡೇಕೊಪ್ಪ ಗ್ರಾಮದ ಬಸವಣ್ಣ ದೇವಸ್ಥಾನ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸದ ಹಿನ್ನೆಲೆ, ಸ್ಥಳೀಯ ಯುವಕರೇ ಶ್ರಮದಾನದ ಮೂಲಕ ರಸ್ತೆ ದುರಸ್ತಿಗೊಳಿಸಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಕೃಷಿ ಕೂಲಿ ಕಾರ್ಮಿಕರು ವಾಸಿಸುವ ಈ ಭಾಗದಲ್ಲಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ರೋಗಿಗಳು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಬೇಸತ್ತ ಗ್ರಾಮದ ಯುವಕರು ಒಟ್ಟಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

Hosanagara-M-Guddekoppa-Youths-fill-pothole

ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಬಳಸಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗಳಿಗೆ ಮಣ್ಣು ಮತ್ತು ಜಲ್ಲಿ ತುಂಬಿಸಿ, ಮಳೆನೀರು ನಿಲ್ಲದಂತೆ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

Shivamogga Live Promotion

ಈ ರಸ್ತೆ ಅಭಿವೃದ್ಧಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ₹9.75 ಲಕ್ಷ ಅನುದಾನ ಮೀಸಲಿಡಲಾಗಿದೆ. ಅದರೆ ಕಾಮಗಾರಿ ಮಾತ್ರ ಈವರೆಗೆ ಮರೀಚಿಕೆಯಾಗಿದೆ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ದುರಸ್ತಿ ಕಾರ್ಯದಲ್ಲಿ ಸ್ಥಳೀಯರಾದ ಸತೀಶ್, ಅಶೋಕ್, ನಿಶ್ಚಿತ್, ಟಾಕಪ್ಪ, ಗಂಗಾಧರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.