ಬುರ್ಖಾ ಧರಿಸಿ ಮಹಿಳೆಯ ಮನೆಗೆ ನುಗ್ಗಿದ 3 ಪುರುಷರು, ಹಿಗ್ಗಾಮುಗ್ಗಾ ಥಳಿಸಿದ ಜನ, ದಾಖಲಾಯ್ತು 2 ಪ್ರಕರಣ

ಶಿವಮೊಗ್ಗ: ನಗರದ ಕೆ.ಆರ್.ಪುರಂ ರಸ್ತೆಯ ಮಸೀದಿ ಬಳಿ ಬುರ್ಖಾ ಧರಿಸಿ ಬಂದಿದ್ದ ಯುವಕರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ದೂರು 1: ಕೊಲೆ ಯತ್ನಕ್ಕೆ ಸುಪಾರಿ ಆರೋಪ, ಮಹಿಳೆಯಿಂದ ದೂರು

ಬುರ್ಖಾ ಧರಿಸಿ ಬಂದಿದ್ದ ಯುವಕರ ವಿರುದ್ಧ ಕೆ.ಆರ್.ಪುರಂ ನಿವಾಸಿ ತಬಸ್ಸುಮ್ ಎಂಬುವವರು ದೂರು ನೀಡಿದ್ದಾರೆ.

Shimoga-Police-Jeep

ಜೂನ್ 10ರಂದು ಸಂಜೆ ಬುರ್ಖಾ ಧರಿಸಿದ್ದ ಮೂವರು ಅಪರಿಚಿತರು ತಬಸ್ಸುಮ್ ಅವರ ಮನೆಗೆ ನುಗ್ಗಿದ್ದಾರೆ. ಇವರನ್ನು ಕಂಡು ತಬಸ್ಸುಮ್‌ ಅವರ ತಾಯಿ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಮೂವರು ಮನೆಯಿಂದ ಹೊರಗೆ ಓಡಿದ್ದಾರೆ. ಕೂಡಲೆ ಸಾರ್ವಜನಿಕರು ಮೂವರನ್ನು ಹಿಡಿದು, ಬುರ್ಖಾ ತೆಗೆಸಿದಾಗ ಪುರುಷರು ಎಂಬುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 

Shivamogga Live Promotion

‘ಯಾಸೀನ್‌ ಖುರೇಶಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪತಿಯೇ ತಬಸ್ಸುಮ್ ಅವರ ಕೊಲೆಗೆ ತಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಒಪ್ಪಿಕೊಂಡಿದ್ದಾರೆʼ ಎಂದು ತಬಸ್ಸುಮ್ ದೂರಿನಲ್ಲಿ ಆರೋಪಿಸಿದ್ದರೆ. ಘಟನೆ ಸಂಬಂಧ ದರ್ಶನ್‌, ಮಹೇಶ್‌, ಅಸ್ಲಂ, ಮುನ್ನಾ, ಮೊಹಮದ್‌ ಸಾದಿಕ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರು 2: ಸಾರ್ವಜನಿಕರಿಂದ ಹಲ್ಲೆ ಆರೋಪ, ಯುವಕರಿಂದ ದೂರು

ಮತ್ತೊಂದೆಡೆ, ಹಲ್ಲೆಗೀಡಾದ ಯುವಕ ಮೊಹಮದ್ ಅಸ್ಲಮ್‌ ಕೂಡ ದೂರು ನೀಡಿದ್ದಾನೆ.‌ ಮುನ್ನಾ ಎಂಬಾತ ಸಾತುವಿನ ಹೆಂಡತಿಯ ಕೊಲೆ ಮಾಡುವಂತೆ ತಿಳಿಸಿದ್ದರಿಂದ ತಾವು ತಬಸ್ಸುಮ್‌ ಅವರ ಮನೆಗೆ ಹೋಗಿದ್ದೆವು. ತಬಸ್ಸುಮ್‌ ಅವರ ಹತ್ಯೆ ಮಾಡಲು ಚಾಕು ಬೀಸಿದ್ದು ಅವರು ಪಾರಾಗಿದ್ದಾರೆ. ತಬಸ್ಸುಮ್‌ ಅವರು ಜೋರಾಗಿ ಕೂಗಿಕೊಂಡಿದ್ದರಿಂದ ಸ್ಥಳೀಯರು ಗುಂಪುಗೂಡಿ ಬುರ್ಖಾ ಧರಿಸಿದ್ದ ತಮ್ಮನ್ನು ಹಿಡಿದುಕೊಂಡರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

15 ರಿಂದ 20 ಜನರಿದ್ದ ಗುಂಪು ನಮ್ಮನ್ನು ತಡೆದು ಬುರ್ಖಾ ತೆಗೆಸಿತು. ಬಳಿಕ ಇವರು ಮಕ್ಕಳ ಕಳ್ಳರು ಎಂದು ಕೂಗಾಡುತ್ತಾ, ಕೊಲೆ ಮಾಡುವ ಉದ್ದೇಶದಿಂದ ಮೈ ಕೈ ಹಾಗೂ ತಲೆಗೆ ತೀವ್ರವಾಗಿ ಹೊಡೆದು ರಕ್ತಗಾಯಗೊಳಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸ್ ಜೀಪ್ ಸ್ಥಳಕ್ಕೆ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮೊಹಮದ್ ಅಸ್ಲಮ್‌ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಎರಡು ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.