ರಾಷ್ಟ್ರಭಕ್ತರ ಬಳಗದಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ, ಕಾರಣವೇನು?

ಶಿವಮೊಗ್ಗ: ಶರಾವತಿ ಕಣಿವೆ ಹಾಗೂ ಇಡೀ ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಮಿತಿ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಈ ಯೋಜನೆಗೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ರಾಜ್ಯ ಸರ್ಕಾರವು ಯಾವುದೇ ಡಿಪಿಆರ್ (DPR) ಇಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ಮೇಘಾ ಇನ್ಫ್ರಾ ಸಂಸ್ಥೆಗೆ ಬರೋಬ್ಬರಿ ₹10,500 ಕೋಟಿ ಮೊತ್ತದ ಟೆಂಡರ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

KS-Eshwarappa-Press-meet-in-Shimoga

ಆರಂಭದಲ್ಲಿ ₹3,500 ಕೋಟಿ ಅಂದಾಜು ವೆಚ್ಚದ ಈ ಯೋಜನೆ ಮೊತ್ತ ಈಗ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇಂದ್ರ ಪರಿಸರ ಇಲಾಖೆ ಮತ್ತು ವನ್ಯಜೀವಿ ಮಂಡಳಿ ಸದಸ್ಯರು ಈ ಯೋಜನೆ ಸಾಧುವಲ್ಲ ಎಂದು ಹೇಳಿದ್ದರೂ, ರಾಜ್ಯ ಸರ್ಕಾರವು ಕೇವಲ ಸ್ವಾರ್ಥಕ್ಕಾಗಿ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ ಎಂದು ಅವರು ಆರೋಪಿಸಿದರು.

Nanjappa Hospital Advertisement

ಸಾಗರ, ಕಾರ್ಗಲ್‌ನಲ್ಲಿ ಬೃಹತ್ ಪ್ರತಿಭಟನೆ

ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ. ಕಾಂತೇಶ್ ಮಾತನಾಡಿ, ಈ ಯೋಜನೆಯನ್ನು ವಿರೋಧಿಸಿ ಜೂನ್ 28ರಂದು ಸಾಗರ ಮತ್ತು ಕಾರ್ಗಲ್‌ನ ಕೆಪಿಸಿ (KPC) ಕಚೇರಿ ಎದುರು ಬೃಹತ್ ಪ್ರತಿಭಟನಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜೂನ್ 28ರಂದು ಬೆಳಗ್ಗೆ 7 ಗಂಟೆಗೆ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಿಂದ ಪರಿಸರಾಸಕ್ತರು ಸುಮಾರು 50 ಬಸ್‌ಗಳಲ್ಲಿ ಸಾಗರಕ್ಕೆ ಹೊರಡಲಿದ್ದಾರೆ. ಸಾಗರದ ಗಾಂಧಿ ವೃತ್ತದಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿರುವ ಈ ಬೃಹತ್ ಪ್ರತಿಭಟನೆಯ ನೇತೃತ್ವವನ್ನು ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ವಹಿಸಲಿದ್ದಾರೆ. ಅಂದು ಮಧ್ಯಾಹ್ನ 3:30ಕ್ಕೆ ಕಾರ್ಗಲ್‌ನಲ್ಲಿರುವ ಕೆಪಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಕಾಂತ್, ವಿ.ರಾಜು, ಮಹದೇವಸ್ವಾಮಿ, ಅಶೋಕ್ ಕುಮಾರ್, ಸುಬ್ರಮಣ್ಯ, ಈಶ್ವರರಾವ್, ರಮೇಶ್, ವಿಶ್ವೇಶ್ವರಯ್ಯ, ಶ್ರೀಪಾದ್ ಭಟ್, ಪ್ರಕಾಶ್, ಅರುಣ್ ಹಾಗೂ ಜನಾರ್ಧನ ಪೈ ಉಪಸ್ಥಿತರಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion