ತೀರ್ಥಹಳ್ಳಿ: ‘ಭಾರತ್ ಜೋಡೊ’ ಯಾತ್ರೆಯ ನೆನಪಿಗಾಗಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಹಿನ್ನೆಲೆ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ತೀರ್ಥಹಳ್ಳಿ ತಾಲೂಕಿನ ಗೀತಾ ಅವರಿಗೆ ಹೊಸ ಮನೆ ನಿರ್ಮಿಸಿಕೊಟ್ಟಿದ್ದಾರೆ. ಇಂದು ಅದರ ಉದ್ಘಾಟನೆ ನಡೆಸಲಾಯಿತು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಯಾರಿದು ಗೀತಾ? ಮನೆ ಕಟ್ಟಿಸಿದ್ದೇಕೆ?
ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆಯ ಗೀತಾ ಅವರು ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಕೆಲವು ವರ್ಷದ ಹಿಂದೆ ಗೀತಾ ಅವರನ್ನು ಶಿವಮೊಗ್ಗ ಪಟ್ಟಣಕ್ಕೆ ಕರೆದೊಯ್ದ ಗಂಡ, ಅಲ್ಲಿಯೇ ಅವರನ್ನು ಬಿಟ್ಟು ಹೋಗಿದ್ದ. ನಾಲ್ಕು ವರ್ಷದ ಹಿಂದೆ ತವರಿಗೆ ಮರಳಿದ ಗೀತಾ ಅವರಿಗೆ ತಾಯಿಯೆ ಆಸರೆಯಾಗಿದ್ದರು. ದುರದೃಷ್ಟವಶಾತ್ ಎರಡು ವರ್ಷದ ಹಿಂದೆ ತಾಯಿ ತೀರಿಕೊಂಡಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಇದ್ದ ಮನೆಯು ಮಳೆಗೆ ಕುಸಿದು ಬಿದ್ದಿತ್ತು. ಏಳು ವರ್ಷದ ಮಗನೊಂದಿಗೆ ಮುರಿದ ಮನೆಯಲ್ಲೆ ಗೀತಾ ವಾಸವಾಗಿದ್ದರು.

ನೆರವಿಗೆ ಧಾವಿಸಿದ ಶ್ರೀನಿವಾಸ್
ಪ್ರತಿ ವರ್ಷ ಒಂದು ಅಶಕ್ತ ಕುಟುಂಬಕ್ಕೆ ಬಿ.ವಿ.ಶ್ರೀನಿವಾಸ್ ನೆರವಾಗುತ್ತಾರೆ. ಈ ಬಾರೀ ಗೀತಾ ಮತ್ತು ಅವರ ಏಳು ವರ್ಷದ ಮಗನಿಗಾಗಿ ಮನೆ ಕಟ್ಟಿಕೊಡಲು ನಿರ್ಧರಿಸಿದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಎಐಸಿಸಿ ಕಾರ್ಯದರ್ಶಿ ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಆರ್ಥಿಕ ನೆರವು ನೀಡಿ ಹೊಸ ಮನೆ ನಿರ್ಮಿಸಿಕೊಟ್ಟಿದ್ದಾರೆ. ಕಾರ್ಯದೊತ್ತಡದ ನಡುವೆಯೂ ಬಿ.ವಿ. ಶ್ರೀನಿವಾಸ್ ಅವರು ಖುದ್ದಾಗಿ ಬಂದು ಮನೆಗೆ ಬಣ್ಣ ಬಳಿಯುವ ಮೂಲಕ ಶ್ರಮದಾನವನ್ನೂ ಮಾಡಿದ್ದರು.
ತಾಯಿ, ಮಗನ ಮೊಗದಲ್ಲಿ ನಗು ಅರಳಿತು
ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಇಂದು ‘ಭಾರತ್ ಜೋಡೊ ಮನೆʼಯನ್ನು ಗೀತಾ ಅವರಿಗೆ ಹಸ್ತಾಂತರಿಸಲಾಯಿತು. ಗೃಹೋಪಯೋಗಿ ವಸ್ತುಗಳನ್ನೂ ವಿತರಿಸಲಾಯಿತು. ದಿಕ್ಕು ತೋಚದಂತಾಗಿದ್ದ ತಾಯಿ ಮತ್ತು ಮಗನ ಮೊಗದಲ್ಲಿ ಬಿ.ವಿ.ಶ್ರೀನಿವಾಸ್ ಮತ್ತು ತೀರ್ಥಹಳ್ಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗು ಅರಳಿಸಿದರು.
ಅಜ್ಜಿಗೆ ನೆರವಾಗಿದ್ದ ಶ್ರೀನಿವಾಸ್
ಕಳೆದ ವರ್ಷ ಇದೇ ಭಾಗದ ಮೇಲಿನಕುರುವಳ್ಳಿಯ ಅಜ್ಜಿಯೊಬ್ಬರಿಗೆ ಬಿ.ವಿ.ಶ್ರೀನಿವಾಸ್ ನೆರವಾಗಿದ್ದರು. ಅವರಿಗೆ ‘ಭಾರತ್ ಜೋಡೋ ಮನೆʼ ನಿರ್ಮಿಸಿ ಕೊಟ್ಟಿದ್ದರು. ಈ ವರ್ಷವು ತಮ್ಮ ಕಾಯಕವನ್ನು ಬಿ.ವಿ. ಶ್ರೀನಿವಾಸ್ ಮುಂದುವರೆಸಿದ್ದು, ಜನರ ಮೆಚ್ಚುಗೆ ಗಳಿಸಿದೆ.
