ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಸಮೀಪದ ತಲ್ಲೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, ಚಿಕಿತ್ಸೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಆಗುಂಬೆಯ ತಲ್ಲೂರು ಗ್ರಾಮದ ಕೊಪ್ಪ ರಸ್ತೆ ನಿವಾಸಿ ಸಂಜಯ್ ಜಿ.ಪಿ. (62) ಮೃತ ದುರ್ದೈವಿ. ಇವರು ಮುಂಚೆ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಕೂಲಿ ಕೆಲಸ ಮಾಡಿಕೊಂಡಿದ್ದರು. ಸಂಜಯ್ ಹಾಗೂ ಅವರ ಅಣ್ಣ ರಾಮನಾಥ್ ಅವರು ವಾಕಿಂಗ್ ಮುಗಿಸಿಕೊಂಡು ವಾಪಸ್ ಬರುವಾಗ ತಲ್ಲೂರು ಗ್ರಾಮದ ಮಹೇಶ್ ಎಂಬುವರ ಹೋಟೆಲ್ಗೆ ಟೀ ಕುಡಿಯಲು ಹೋಗಿದ್ದರು.

ತೀವ್ರ ಗಾಯ, ಆಸ್ಪತ್ರೆಗೆ ಹೋಗುವಾಗ ಸಾವು
ಟೀ ಕುಡಿದು ಸಂಜಯ್ ಅವರು ಮನೆಗೆ ತೆರಳಲು ಶಿವಮೊಗ್ಗ-ಉಡುಪಿ ಮುಖ್ಯ ರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ಆಗುಂಬೆ ಬಸ್ ನಿಲ್ದಾಣದ ಕಡೆಯಿಂದ ಬಂದ ಕಾರು ಸಂಜಯ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮೇಲೆ ಉರುಳಿ ಬಿದ್ದಿದ್ದಾರೆ. ಘಟನೆಯಲ್ಲಿ ಸಂಜಯ್ ಅವರ ತಲೆ, ಸೊಂಟ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಂಜಯ್ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ
ಇನ್ನು, ಕಾರ್ಯನಿಮಿತ್ತ ಆಗುಂಬೆಗೆ ಭೇಟಿ ನೀಡಿದ್ದ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯರ ಜೊತೆಗೆ ಚರ್ಚೆ ನಡೆಸಿ, ಅಪಘಾತ ತಪ್ಪಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
