ಭದ್ರಾವತಿ ESI ಆಸ್ಪತ್ರೆ: ಎಂಎಲ್‌ಎ ಪ್ರಯತ್ನಕ್ಕೆ VISL ಗುತ್ತಿಗೆ ಕಾರ್ಮಿಕರು ಹರ್ಷ

ಭದ್ರಾವತಿ: ಇಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆಗಾಗಿ ಸಾಮಾನ್ಯ ವೈದ್ಯರು, ತಜ್ಞ ವೈದ್ಯರಿಗೆ ನೀಡುತ್ತಿದ್ದ ಉಲ್ಲೇಖಿತ ಪತ್ರ (ಓಪಿಡಿ ರೆಫರಲ್) ಸೇರಿದಂತೆ ಎಲ್ಲಾ ಸೌಲಭ್ಯ ಎಂದಿನಂತೆ ಸ್ಥಳೀಯವಾಗಿಯೇ ಲಭಿಸಲಿವೆ. ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ತಿಳಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಭದ್ರಾವತಿ ಇಎಸ್‌ಐ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಗೆ ನೀಡಲಾಗುತ್ತಿದ್ದ ಉಲ್ಲೇಖಿತ ಪತ್ರ ಹಾಗೂ ಇನ್ನಿತರ ವೈದ್ಯಕೀಯ ಸೌಲಭ್ಯಗಳನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಆತಂಕಗೊಂಡ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘಟನೆಗಳು ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸಮಸ್ಯೆ ಬಗೆಹರಿಸುವಂತೆ ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.

Bhadravathi-MLA-Sangameshwara-memorandum-about-ESI-Hospital

ಆಯುಕ್ತರನ್ನು ಭೇಟಿಯಾದ ಎಂಎಲ್‌ಎ

ಕಾರ್ಮಿಕರ ಮನವಿಗೆ ಸ್ಪಂದಿಸಿದ ಶಾಸಕ ಸಂಗಮೇಶ್ವರ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ನಿಯೋಗದೊಂದಿಗೆ ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದರು. ಆಸ್ಪತ್ರೆಯ ಎಲ್ಲಾ ಸೌಲಭ್ಯ ಸ್ಥಳೀಯವಾಗಿಯೇ ಮುಂದುವರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಲಿಖಿತ ಮನವಿ ಸಲ್ಲಿಸಿದರು. ಶಾಸಕರ ಮನವಿಗೆ ಆಯುಕ್ತರು ಪೂರಕವಾಗಿ ಸ್ಪಂದಿಸಿದ್ದು, ಸೌಲಭ್ಯಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪಿದ್ದಾರೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.

ತಮ್ಮ ಬೇಡಿಕೆಗೆ ತಕ್ಷಣ ಸ್ಪಂದಿಸಿದ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪದಾಧಿಕಾರಿಗಳಾದ ರಾಕೇಶ್, ಮಂಜುನಾಥ್, ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ (ಎಐಟಿಯುಸಿ ಸಂಯೋಜಿತ) ಗುತ್ತಿಗೆ ಕಾರ್ಮಿಕರ ಸಂಘದ ಸತೀಶ್ ಅರುಣಾಚಲ, ಐಸಾಕ್ ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಹೆಚ್.ಆರ್. ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion