ಖಾಸಗಿ ಬಸ್‌ ನಿಲ್ದಾಣಕ್ಕೆ MLA ದಿಢೀರ್‌ ಭೇಟಿ, ಪರಿಶೀಲನೆ, ಅಧಿಕಾರಿಗಳಿಗೆ ಗಡುವು, ಯಾಕೆ?

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶಾಸಕ ಎಸ್‌.ಎನ್.ಚನ್ನಬಸಪ್ಪ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡಸಿದರು. ಈ ವೇಳೆ ಮೂಲಸೌಕರ್ಯ ಕೊರತೆ ಮತ್ತು ಸ್ವಚ್ಛತೆ ವೈಫಲ್ಯ ಕಂಡು ಗರಂ ಆದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಾಸಕರ ಆಕ್ರೋಶಕ್ಕೆ ಕಾರಣಗಳೇನು?

ಶಾಸಕ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಜೊತೆಗೆ ಬಸ್‌ ನಿಲ್ದಾಣದಾದ್ಯಂತ ಪರಿಶೀಲನೆ ನಡೆಸಿದರು. ಈ ಸಂದರ್ಭ ಹಲವು ಸಮಸ್ಯೆಗಳು ಅವರ ಕಣ್ಣಿಗೆ ಬಿದ್ದವು. ಇದೇ ವೇಳೆ ಸಾರ್ವಜನಿಕರು ಕೂಡ ಹಲವು ದೂರುಗಳನ್ನು ಹೇಳಿದರು. ಇದು ಶಾಸಕ ಚನ್ನಬಸಪ್ಪ ಅಸಮಾಧಾನಕ್ಕೆ ಕಾರಣವಾಯಿತು.

MLA-Channabasappa-visit-Private-Bus-Stand-in-Shimoga.

  • ಪಾದಚಾರಿ ಮಾರ್ಗಗಳನ್ನು ಅನಧಿಕೃತವಾಗಿ ಅತಿಕ್ರಮಣ ಮಾಡಿರುವುದು.
  • ಪ್ರಯಾಣಿಕರ ವಿಶ್ರಾಂತಿ ಗೃಹಗಳ ಕಳಪೆ ನಿರ್ವಹಣೆ ಮತ್ತು ಆಸನಗಳು ಗಲೀಜಾಗಿರುವುದು.
  • ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸದೆ ಶೌಚಾಲಯಗಳಿಗೆ ಬೀಗ ಹಾಕಿರುವುದು.
  • ಶುದ್ಧ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು

ಅಧಿಕಾರಿಗಳಿಗೆ ಕಟ್ಟುನಿಟ್ಟು ಸೂಚನೆ

ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ ಶಾಸಕರು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಗಡುವು ವಿಧಿಸಿದರು.

  • ನಿಲ್ದಾಣದ ಎಲ್ಲಾ ಶೌಚಾಲಯಗಳನ್ನು ಒಂದು ವಾರದೊಳಗೆ ದುರಸ್ತಿಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕು. ನೂತನ ಶೌಚಾಲಯಗಳ ಟೆಂಡರ್ ಪ್ರಕ್ರಿಯೆ ಈ ತಿಂಗಳೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
  • ಕುಡಿಯುವ ನೀರಿನ ಫಿಲ್ಟರ್‌ಗಳನ್ನು ತಕ್ಷಣ ಪುನಶ್ಚೇತನಗೊಳಿಸಬೇಕು ಹಾಗೂ ಅಲ್ಲಿನ ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯವಿರುವ ಪೀಠೋಪಕರಣ ಒದಗಿಸಬೇಕು.
  • ಖಾಸಗಿ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳ ಪ್ರವೇಶ ನಿಷೇಧಿಸಬೇಕು. ತಿಂಡಿಗಾಡಿಗಳು ಹಾಗೂ ತಾತ್ಕಾಲಿಕ ಹೂವಿನ ಮಳಿಗೆಗಳನ್ನು ನಿಗದಿಪಡಿಸಿದ ಕಾಂಪ್ಲೆಕ್ಸ್‌ಗೆ ಸ್ಥಳಾಂತರಿಸಿ, ಆ ಜಾಗವನ್ನು ದ್ವಿಚಕ್ರ ವಾಹನ ನಿಲುಗಡೆಗೆ ಬಳಸಬೇಕು.
  • ನಿಲ್ದಾಣದ ಆವರಣದಲ್ಲಿ ತಕ್ಷಣವೇ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮಹಿಳಾ ಸುರಕ್ಷತೆಗಾಗಿ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಗಸ್ತು ವಾಹನ ನಿಯೋಜಿಸಬೇಕು.
  • ಮುಂಬರುವ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಳಚರಂಡಿಗಳ ಹೂಳೆತ್ತುವ ಕಾಮಗಾರಿಯನ್ನು ತಕ್ಷಣ ಕೈಗೊಳ್ಳಬೇಕು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್‌, ನಗರ ಉಪಾಧ್ಯಕ್ಷ ಪಿ.ಪ್ರಭಾಕ‌ರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ್, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವಸಂತ್ ಕುಮಾ‌ರ್, ಸೀತಾರಾಮ್ ಸೇರಿದಂತೆ ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion