ಶಿವಮೊಗ್ಗ: ನಗರದ ದುರ್ಗಿಗುಡಿಯಲ್ಲಿರುವ ಕೃತ್ವಿ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯೆ ಹಾಗೂ ಟಿಎಂಎಇಎಸ್ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಪ್ರಕೃತಿ ಮಂಚಾಲೆ ಅವರಿಗೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಮುಖ್ಯಸ್ಥೆಯೂ ಆಗಿರುವ ಡಾ. ಪ್ರಕೃತಿ ಅವರು, ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಡಾ. ಜೆ. ಆರ್. ಜೋಶಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ‘ಆಯುರ್ವೇದದಲ್ಲಿ ಸೌಂದರ್ಯವರ್ಧಕಗಳ ವಿಮರ್ಶಾತ್ಮಕ ಅಧ್ಯಯನ ಮತ್ತು ನೆತ್ತಿಯ ಸೋರಿಯಾಸಿಸ್ ನಿರ್ವಹಣೆಯಲ್ಲಿ ಗುಂಜಾ ಭೃಂಗರಾಜ ತೈಲದ ಕ್ಲಿನಿಕಲ್ ಅಧ್ಯಯನ’ ಕುರಿತು ಅವರು ಮಂಡಿಸಿದ್ದ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯ ಅಂಗೀಕರಿಸಿದೆ.

ಆಯುರ್ವೇದದ ಪರಂಪರೆಯ ತತ್ವಗಳನ್ನು ಆಧುನಿಕ ಸೌಂದರ್ಯ ವಿಜ್ಞಾನದೊಂದಿಗೆ ಸಂಯೋಜಿಸುವ ನಿಟ್ಟಿನಲ್ಲಿ ಈ ಸಂಶೋಧನೆ ಮಹತ್ವದ್ದಾಗಿದೆ ಎಂದು ಮೌಲ್ಯೀಕರಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವದಲ್ಲಿ ಈ ಪದವಿ ಪ್ರದಾನ ಮಾಡಲಾಯಿತು. ಕಳೆದ 12 ವರ್ಷಗಳಿಂದ ಶಿವಮೊಗ್ಗದಲ್ಲಿ ಆಯುರ್ವೇದ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಪ್ರಕೃತಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
