ಬಾಂಬ್‌ ಬೆದರಿಕೆ, ಶಿವಮೊಗ್ಗ ಕೋರ್ಟ್‌ನಲ್ಲಿ ಏನೇನಾಯ್ತು? ಬೆದರಿಕೆ ಈ-ಮೇಲ್‌ನಲ್ಲಿ ಏನಿದೆ?

ಶಿವಮೊಗ್ಗ: ಜಿಲ್ಲಾ ಸಿವಿಲ್‌ ಮತ್ತು ಕ್ರಿಮಿನಲ್‌ ನ್ಯಾಯಾಲಯದ ಆವರಣದಲ್ಲಿ ಬಾಂಬ್‌ ಸ್ಪೋಟಿಸುವ ಬೆದರಿಕೆ ಈ-ಮೇಲ್‌ ಬಂದ ಹಿನ್ನೆಲೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಬೆದರಿಕೆ ಈ-ಮೇಲ್‌ನಲ್ಲಿ ಏನಿದೆ?

ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಈ-ಮೇಲ್‌ ಐಡಿಗೆ ಇಂದು ಬಾಂಬ್‌ ಬೆದರಿಕೆ ಈ-ಮೇಲ್‌ ಬಂದಿದೆ. ‘ಉದಯ ನಿಧಿ ಸ್ಟಾಲಿನ್‌ ಅವರನ್ನು ಬೆಂಬಲಿಸಲು ಚೆನ್ನೈ ಪತ್ರಕರ್ತರಿಗೆ ಅಪ್ರಾಪ್ತ ಬಾಲಕಿಯರನ್ನು ಕಳುಹಿಸಲಾಗಿದೆ. ಅವರ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ. ತುಕ್ಕು ಹಿಡಿದ ಮೊಳೆಗಳನ್ನು ಜೋಡಿಸಲಾದ 5 ಮಿನಿ ಸಿಲಿಂಡರ್‌ ಬಾಂಬುಗಳನ್ನು ಇಂದು ಮಧ್ಯಾಹ್ನ 2:30ಕ್ಕೆ ಸ್ಪೋಟಿಸಲಾಗುತ್ತದೆʼ ಎಂದು ಬೆದರಿಕೆ ಈ ಮೇಲ್‌ನಲ್ಲಿ ತಿಳಿಸಲಾಗಿದೆ. ಅಲ್ಲದೆ ಇಂಗ್ಲೀಷ್‌ನಲ್ಲಿ ಇನ್ನೂ ಎರಡ್ಮೂರು ಪ್ಯಾರಾದಲ್ಲಿ ವಿವರಣೆ ನೀಡಲಾಗಿದೆ. ಅಲ್ಲದೆ ಕೆಲವು ಸಾಮಾಜಿಕ ಜಾಲತಾಣಗಳ ಲಿಂಕ್‌ಗಳನ್ನು ಕೂಡ ನೀಡಲಾಗಿದೆ.

Bomb-Threat-to-Shivamogga-court.

ಸ್ಥಳಕ್ಕೆ ‍ಪೊಲೀಸ್‌, ಶ್ವಾನದಳ ದೌಡು

ಇನ್ನು, ಬಾಂಬ್‌ ಬೆದರಿಕೆಯ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಶ್ವಾನ ದಳ, ಬಾಂಬ್‌ ಪತ್ತೆ ದಳದ ಅಧಿಕಾರಿಗಳು ನ್ಯಾಯಾಲಯಕ್ಕೆ ದೌಡಾಯಿಸಿದರು. ನ್ಯಾಯಾಲಯದ ಸಂಕೀರ್ಣದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಕೋರ್ಟ್‌ ಹಾಲ್‌, ನ್ಯಾಯಾಲಯದ ಕೊಠಡಿಗಳು, ರೆಕಾರ್ಡ್‌ ರೂಂ ಸೇರಿದಂತೆ ಎಲ್ಲ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ವಾಹನಗಳ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೂಡ ಶೋಧಿಸಲಾಯಿತು.

ಬ್ಯಾಗು, ಲಗೇಜ್‌ಗಳ ತಪಾಸಣೆ

ಬಾಂಬ್‌ ಬೆದರಿಕೆ ಹಿನ್ನೆಲೆ ಕೋರ್ಟ್‌ ಆವರಣದಲ್ಲಿ ಬಂದೋಬಸ್ತ್‌ ಹೆಚ್ಚಳ ಮಾಡಲಾಗಿದೆ. ಕೋರ್ಟ್‌ಗೆ ಬರುವ ನಾಗರಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಕೋರ್ಟ್‌ ಕಟ್ಟಡದ ಎರಡು ಗೇಟ್‌ಗಳ ಹೊರತು ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಲಾಗಿದೆ. ಎರಡು ಗೇಟ್‌ಗಳಲ್ಲಿಯು ಮೆಟಲ್‌ ಡಿಟೆಕ್ಟರ್‌ ಇರಿಸಲಾಗಿದೆ. ಇನ್ನು, ಕೋರ್ಟ್‌ ಆವರಣದೊಳಗೆ ಪ್ರವೇಶಿಸುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೋರ್ಟ್‌ಗೆ ಬರುವವರ ಬ್ಯಾಗುಗಳನ್ನು ತಪಾಸಣೆ ಮಾಡಲಾಯಿತು.

ಜಿಲ್ಲಾ ರಕ್ಷಣಾಧಿಕಾರಿ ಭೇಟಿ, ಪರಿಶೀಲನೆ

ಇನ್ನು, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್‌.ಬಿ ಅವರು ಕೋರ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋರ್ಟ್‌ ಆವರಣದ ವಿವಿಧೆಡೆ ಭೇಟಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೆ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್‌.ಜಿ.ಎ ಅವರನ್ನು ಭೇಟಿಯಾಗಿ ಮಾಹಿತಿ ಪಡೆದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion