ಲೋಕಾಯುಕ್ತ ದಾಳಿ: ಸರ್ಚ್‌ ವಾರಂಟ್‌ ಸಹಿತ ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ಪರಿಶೀಲನೆ, ಯಾಕೆ?

ಶಿವಮೊಗ್ಗ: ನಗರದ ತಾಲ್ಲೂಕು ಕಚೇರಿಯ ಆಡಳಿತ ವಿಭಾಗದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಸರ್ಚ್ ವಾರಂಟ್‌ನೊಂದಿಗೆ ದಿಢೀರ್ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಪರಿಶೀಲನೆಗೆ ಕಾರಣವೇನು?

ಶಿವಮೊಗ್ಗದ ಗೋವಿಂದಾಪುರದಲ್ಲಿ ಸುಮಾರು 11 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಗಂಭೀರ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಗೋವಿಂದಾಪುರ ವ್ಯಾಪ್ತಿಯ ಎರಡು ಪ್ರತ್ಯೇಕ ಖಾತೆಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ಈಗಾಗಲೇ 33 ಶೆಡ್‌ಗಳನ್ನು ನಿರ್ಮಿಸಲಾಗಿದೆ. ಈ ಶೆಡ್‌ಗಳಲ್ಲಿ ವಾಸವಿರುವವರಿಗೆ ಖಾತೆ ಮಾಡಿಸಿಕೊಡುವುದಾಗಿ ನಂಬಿಸಿ ಕೆಲವು ಮಧ್ಯವರ್ತಿಗಳು ಹಣ ಪಡೆದಿದ್ದಾರೆ ಹಾಗೂ ಇದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Lokayukta-verifies-documents-at-Taluk-office-in-Shimoga.

ಈ ದೂರಿನ ಬೆನ್ನತ್ತಿದ ಲೋಕಾಯುಕ್ತ ಅಧಿಕಾರಿಗಳು, ಲೋಕಾಯುಕ್ತ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ತಾಲ್ಲೂಕು ಕಚೇರಿಯ ಆಡಳಿತ ವಿಭಾಗದ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಡೀ ದಿನ ಅಗಸವಳ್ಳಿ ಪಿಡಿಒ ಕಚೇರಿಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳ ತಂಡ ಸುದೀರ್ಘ ಪರಿಶೀಲನೆ ನಡೆಸಿತ್ತು.

15ಕ್ಕೂ ಹೆಚ್ಚು ಅಧಿಕಾರಿಗಳಿಂದ ತಪಾಸಣೆ

ಶಿವಮೊಗ್ಗ ಲೋಕಾಯುಕ್ತ ಠಾಣೆಯ 15ಕ್ಕೂ ಹೆಚ್ಚು ಅಧಿಕಾರಿಗಳ ಒಳಗೊಂಡ ಪ್ರತ್ಯೇಕ ತಂಡಗಳು ಈ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಗೋವಿಂದಾಪುರ ಜಮೀನು ಹಗರಣದ ಜೊತೆಗೆ, ನವುಲೆಯ ಕೆರೆ ಒತ್ತುವರಿ ಪ್ರಕರಣ ಹಾಗೂ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ವಿಳಂಬ ಮಾಡುತ್ತಿರುವ ಕುರಿತು ಬಂದಿರುವ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿಯೂ ಕಡತಗಳ ತಪಾಸಣೆ ನಡೆಸಲಾಗುತ್ತಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion