ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಒದಗಿಸಲು ಮತ್ತು ಬಾಕಿ ಬಿಲ್ ಪಾವತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಬೆಂಗಳೂರಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ಸಂಸದ ರಾಘವೇಂದ್ರ, ವಾರ್ಷಿಕ ದುರಸ್ತಿ ಇಲ್ಲದೆ ಕಾಲುವೆಗಳಲ್ಲಿ ಹೂಳು ತುಂಬಿದ್ದು ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹೀಗಾಗಿ, ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಹಾಯ್‌ಹೊಳೆ, ಬಾರೆಹಳ್ಳ (ಪುರದಾಳ್) ಮತ್ತು ಗೌಡನಕೆರೆಗಳ ಕಾಲುವೆ ಆಧುನೀಕರಣಕ್ಕಾಗಿ ₹80 ಕೋಟಿ ಅನುದಾನ ನೀಡಬೇಕು. ಕೂಡ್ಲಿ ಮತ್ತು ಹೊಳೆಬೆನವಳ್ಳಿ ಗ್ರಾಮಗಳ ಬಳಿ ಪ್ರವಾಹ ನಿಯಂತ್ರಣ ತಡೆಗೋಡೆ ನಿರ್ಮಾಣಕ್ಕೆ ₹20 ಕೋಟಿ ನೀಡಬೇಕು. ಒಟ್ಟು ₹100 ಕೋಟಿ ಮೊತ್ತದ ಪ್ರಸ್ತಾವನೆಗೆ ತಕ್ಷಣವೇ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಸಂಪರ್ಕ ಕಡಿತಕ್ಕೆ ಆಕ್ಷೇಪ
ಜಿಲ್ಲೆಯಲ್ಲಿ ನೀರಿನ ಮಟ್ಟ ಕುಸಿದಿರುವ ಈ ಸಂದರ್ಭದಲ್ಲಿ, ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಮೆಸ್ಕಾಂ ಇಲಾಖೆಯು ಏತ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಕ್ಕೆ ಸಂಸದ ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.
ಶಿಕಾರಿಪುರದ ಉಡುಗಣಿ-ತಾಳಗುಂದ-ಹೊಸೂರು, ಕಸಬಾ, ಸನ್ಯಾಸಿಕೊಪ್ಪ ಹಾಗೂ ಸೊರಬದ ಮೂಡಿ, ಮೂಗೂರು ಮತ್ತು ಕಚವಿ ಸೇರಿದಂತೆ ಒಟ್ಟು 8 ಪ್ರಮುಖ ಯೋಜನೆಗಳ ₹62.56 ಕೋಟಿ ಬಾಕಿ ವಿದ್ಯುತ್ ಬಿಲ್ ಪಾವತಿಸಲು ಸರ್ಕಾರ ಅನುದಾನ ನೀಡಬೇಕು. ಅಲ್ಲಿಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮೆಸ್ಕಾಂಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಇದೇ ವೇಳೆ ಉಡುಪಿ ಜಿಲ್ಲೆಯ ಬೈಂದೂರು ವ್ಯಾಪ್ತಿಯ ಸಿದ್ಧಾಪುರ ಏತ ನೀರಾವರಿ ಯೋಜನೆಯ ತಡೆಯಾಜ್ಞೆ ತೆರವುಗೊಳಿಸುವಂತೆಯೂ ಸಚಿವ ರಾಮಲಿಂಗಾರೆಡ್ಡಿ ಅವರ ಗಮನ ಸೆಳೆದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ, ಪ್ರಸ್ತಾವನೆಯನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಎಂದು ಸಂಸದ ರಾಘವೇಂದ್ರ ಅವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
