‘ಕುಡಿಯುವ ನೀರಿಗೆ ₹100 ಕೊಡಲು ಸಿದ್ಧ, ಹಾಲಿನ ದರ ₹2 ಹೆಚ್ಚಿಸಿದರೆ ಕೋಲಾಹಲʼ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ‘ಇವತ್ತಿನ ದಿನಗಳಲ್ಲಿ ಜನ ಒಂದು ಗ್ಲಾಸ್‌ ಶುದ್ಧ ಕುಡಿಯುವ ನೀರಿಗೆ ₹100 ಕೊಡಲು ಸಿದ್ಧರಿದ್ದಾರೆ. ಪೆಟ್ರೋಲ್, ಡೀಸೆಲ್‌ಗೂ ಕೇಳಿದಷ್ಟು ಹಣ ನೀಡುತ್ತಾರೆ. ಆದರೆ ಪೌಷ್ಟಿಕಾಂಶ ನೀಡುವ ಹಾಲಿನ ದರವನ್ನು ಕೇವಲ ₹2 ಹೆಚ್ಚಿಸಿದರೆ ಇಡೀ ಸಮಾಜದಲ್ಲಿ ಕೋಲಾಹಲ ಸೃಷ್ಟಿಸುತ್ತಾರೆ’ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ ಡಾ.ಆರ್.ಎಂ.ಮಂಜುನಾಥ್ ಗೌಡ ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯ ಐದು ವರ್ಷಗಳ ಅಂಗವಾಗಿ ಜುಲೈ 7ರ ವರೆಗೆ ಹಮ್ಮಿಕೊಳ್ಳಲಾಗಿರುವ ‘ಸಹಕಾರ ಸಪ್ತಾಹ’ದ ಅಂಗವಾಗಿ, ಶಿಮೂಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಶಿವಮೊಗ್ಗ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಹಾಗೂ ಕೃತಕ ಗರ್ಭಧಾರಣ ಕಾರ್ಯಕರ್ತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

‘ಶಿಮೂಲ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ 9.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ. ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು, ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಬೇಕಿದೆʼ ಎಂದರು.

Workshop-in-SHIMUL-RM-Manjunatha-Gowda-inaugurates-the-event

‘ರೈತರು ಮಣ್ಣಿನ ಫಲವತ್ತತೆ ಉಳಿಸಲು ರಾಸಾಯನಿಕ ಬಿಟ್ಟು ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚಾಗಿ ಬಳಸಬೇಕು. ಹಾಲಿನಂತೆ ಕೊಟ್ಟಿಗೆ ಗೊಬ್ಬರವೂ ಲಾಭದಾಯಕ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣು ನಾಶವಾಗಿ ಅಡಿಕೆ ತೋಟಗಳು ರೋಗಕ್ಕೆ ತುತ್ತಾಗುತ್ತಿವೆ. ನಾನು ತೋಟಕ್ಕೆ ಕೊಟ್ಟಿಗೆ ಗೊಬ್ಬರ ಬಳಸುತ್ತಿದ್ದು, ಬೆಳೆ ಉತ್ತಮವಾಗಿದೆʼ ಎಂದು ಮಂಜುನಾಥ ಗೌಡ ತಿಳಿಸಿದರು.  

ಆ ರೈತರಿಗೆ ಸೌಲಭ್ಯ ಕಡಿತ

ಶಿಮೂಲ್ ಅಧ್ಯಕ್ಷ ವಿದ್ಯಾಧರ್ ಮಾತನಾಡಿ, ‘ಒಕ್ಕೂಟದ ನಿತ್ಯದ ಬಳಕೆಗೆ 4.5 ಲಕ್ಷ ಲೀಟರ್ ಹಾಲು ಸಾಕಾಗುತ್ತದೆ. ಆದರೆ ಪ್ರತಿದಿನ 9.5 ಲಕ್ಷ ಲೀಟರ್ ಹಾಲು ಬರುತ್ತಿದೆ. ಆರ್‌.ಎಂ.ಮಂಜುನಾಥ ಗೌಡರು ಕೆಎಂಎಫ್‌ ನಿರ್ದೇಶಕರಾದ ಮೇಲೆ ಹೆಚ್ಚುವರಿ 3.5 ಲಕ್ಷ ಲೀಟರ್ ಅನ್ನು ಹೊರ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಉಳಿದ 2.5 ಲಕ್ಷ ಲೀಟರ್ ಅನ್ನು ಹಾಲಿನ ಪುಡಿ ತಯಾರಿಕೆಗೆ ಬಳಸಲಾಗುತ್ತಿದೆ. ಒಕ್ಕೂಟದಿಂದ ಕಟ್ಟಡ ನಿರ್ಮಾಣಕ್ಕೆ ₹9 ಲಕ್ಷದವರೆಗೆ ನೆರವು, ನಿವೃತ್ತ ಸದಸ್ಯರಿಗೆ ₹3 ಲಕ್ಷ ಹಾಗೂ 40 ಸಾವಿರ ರಬ್ಬರ್ ಮ್ಯಾಟ್ ಸೇರಿದಂತೆ ಅನೇಕ ಸಬ್ಸಿಡಿ, ಇನ್ಶೂರೆನ್ಸ್ ಸೌಲಭ್ಯ ನೀಡಲಾಗುತ್ತಿದೆ. ಆದರೂ ಕೆಲವು ರೈತರು ಖಾಸಗಿ ಸಂಸ್ಥೆಗಳಿಗೆ ಹಾಲು ನೀಡುತ್ತಿದ್ದಾರೆ. ಅಂತಹ ರೈತರ ಷೇರು ವಾಪಸ್ ನೀಡಿ, ಒಕ್ಕೂಟದ ಯಾವುದೇ ಸೌಲಭ್ಯ ನೀಡದಂತೆ ಸೂಚಿಸಿದ್ದೇನೆ’ ಎಂದು ಎಚ್ಚರಿಸಿದರು.

ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಸಿ.ಕಲ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಸಂಘಗಳ ಗಣಕೀಕರಣ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ಬಡ್ಡಿರಹಿತ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಹನುಮಂತಪ್ಪ ಸಿ., ಮಾಜಿ ಅಧ್ಯಕ್ಷ ಕೆ.ಎ.ಜಗದೀಶ್ವರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಶಿಮೂಲ್ ಉಪಾಧ್ಯಕ್ಷ ಚೇತನ್ ಎಸ್. ನಾಡಿಗರ, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಪಿ.ಆರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಹಾಯಕ ವ್ಯವಸ್ಥಾಪಕಿ ಸ್ವೀಟಿ ಹಾಗೂ ಡಾ.ಸೂರಜ್ ತರಬೇತಿ ನೀಡಿದರು.