ಶಿವಮೊಗ್ಗ: ಬಿಎಂಡಬ್ಲು ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹಾವೇರಿ ಮೂಲದ ಕುರಿ ವ್ಯಾಪಾರಿಯೊಬ್ಬನನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹1.10 ಲಕ್ಷ ಮೌಲ್ಯದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಹಾವೇರಿಯ ನಾಗೇಂದ್ರ ಮಟ್ಟಿ ನಿವಾಸಿ ಮೌಲಾ ಸಾಬ ಕರ್ಜಗಿ (46) ಬಂಧಿತ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದ ಗೆಜ್ಜೇನಹಳ್ಳಿ ಕಡೆಯಿಂದ ಸೋಮಿನಕೊಪ್ಪ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಬಿಎಂಡಬ್ಲು ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವ ಕುರಿತು ಸಬ್ ಇನ್ಸ್ಪೆಕ್ಟರ್ ತಿರುಮಲೇಶ್.ಜಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಗೆಜ್ಜೇನಹಳ್ಳಿ ರಸ್ತೆಯ ಡಾಕ್ಟರ್ಸ್ ಕಾಲೋನಿ ಬಳಿ ಕಾರನ್ನು ತಡೆದು ತಪಾಸಣೆ ನಡೆಸಾಯಿತು. ಕಾರಿನ ಡಿಕ್ಕಿಯಲ್ಲಿ ಗಾಂಜಾ ಪತ್ತೆಯಾಗಿದೆ.

ಖಾಕಿ ಟೇಪ್ನಿಂದ ಸುತ್ತಿದ್ದ ಗಾಂಜಾ
ಖಾಕಿ ಟೇಪ್ನಿಂದ ಸುತ್ತಿ ಪ್ಯಾಕ್ ಮಾಡಲಾಗಿದ್ದ ಒಟ್ಟು 2 ಕೆ.ಜಿ 110 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ₹1.10 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಯಿಂದ ಬಿಎಂಡಬ್ಲು ಕಾರ್ ಹಾಗೂ ಮೊಟೊರೊಲಾ ಮೊಬೈಲ್ ಫೋನ್ ಸೇರಿ ಒಟ್ಟು ₹6.20 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.