ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆ ಪಿಎಸ್ಐ ಎನ್. ಮಂಜುನಾಥ್ (56) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ಕೆಲವು ಕಾಲದಿಂದ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗದ ಖಾಸಗಿ ಆಸ್ಪತ್ರೆ ಹಾಗೂ ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಬುಧವಾರ ಆರೋಗ್ಯ ತಪಾಸಣೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಮೂಲತಃ ತುಮಕೂರು ಜಿಲ್ಲೆಯ ಹಾರೋನಹಳ್ಳಿ ಗ್ರಾಮದವರಾದ ಅವರು, ಹಲವು ವರ್ಷಗಳಿಂದ ಶಿವಮೊಗ್ಗದ ವಿನೋಬನಗರದಲ್ಲಿ ಕುಟುಂಬಸಮೇತ ನೆಲೆಸಿದ್ದರು. 1992ರ ಬ್ಯಾಚ್ನಲ್ಲಿ ಕಾನ್ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಮಂಜುನಾಥ್ ಅವರು, ತಮ್ಮ ಸೇವಾವಧಿಯಲ್ಲಿ ಮುಖ್ಯಪೇದೆ ಹಾಗೂ ಎಎಸ್ಐ ಆಗಿ ಸೇವೆ ಸಲ್ಲಿಸಿ, ನಾಲ್ಕು ವರ್ಷಗಳ ಹಿಂದೆ ಪಿಎಸ್ಐ ಆಗಿ ಬಡ್ತಿ ಹೊಂದಿದ್ದರು. ಮಂಜುನಾಥ್ ಅವರಿಗೆ ಪತ್ನಿಯಿದ್ದು, ಮಕ್ಕಳಿರಲಿಲ್ಲ.