ಭದ್ರಾವತಿ: ನಗರದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದ ವೇಳೆ ಕರ್ತವ್ಯನಿರತ ಬಿಎಲ್ಒ ಒಬ್ಬರಿಗೆ ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ಹಳೇನಗರದ ಖಾಜಿ ಮೊಹಲ್ಲಾ ಹಾಗೂ ಕೋಟೆ ಏರಿಯಾ ಭಾಗದಲ್ಲಿ ಬಿಎಲ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ರಹಮತುಲ್ಲಾ (50) ಎಂಬುವವರ ಮೇಲೆ ಈ ನಾಯಿ ದಾಳಿ ನಡೆದಿದೆ. ಕೋಟೆ ಏರಿಯಾದ ಮನೆಯೊಂದಕ್ಕೆ ಫಾರ್ಮ್ ಸಂಗ್ರಹಿಸಲು ಹೋಗಿದ್ದ ವೇಳೆ ನಾಯಿಯು ರಹಮತುಲ್ಲಾ ಅವರ ಕಾಲಿಗೆ ಕಚ್ಚಿದೆ.

ಘಟನೆಯಲ್ಲಿ ಗಾಯಗೊಂಡ ಬಿಎಲ್ಒ ರಹಮತುಲ್ಲಾ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಉಪ ತಹಶೀಲ್ದಾರ್ ಮಂಜನಾಯ್ಕ್ ಅವರು ಗಾಯಾಳು ಬಿಎಲ್ಒ ಅವರ ಆರೋಗ್ಯವನ್ನು ವಿಚಾರಿಸಿದರು.
ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದಂದಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ಎರಡನೇ ಘಟನೆ ಇದಾಗಿದೆ. ಕಳೆದ ಎರಡು ವಾರಗಳ ಹಿಂದೆ ಸಾಗರದಲ್ಲೂ ಸಹ ಇದೇ ರೀತಿ ಎಸ್ಐಆರ್ ಪ್ರಕ್ರಿಯೆ ವೇಳೆ ಲಕ್ಷ್ಮೀ ಸಿಂಗ್ ಎಂಬ ಬಿಎಲ್ಒ ಅವರಿಗೆ ನಾಯಿ ಕಚ್ಚಿದ್ದ ಘಟನೆ ನಡೆದಿತ್ತು.