NEWS HIGHLIGHTS
ಭದ್ರಾವತಿ: ಅನುಮತಿ ಇಲ್ಲದೆ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ನಾಲೆಗೆ ನೀರು ಹರಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ, ಆಯುಕ್ತ ಪ್ರದೇಶ ರೈತರು ಹಾಗೂ ಪ್ರಗತಿ ರೈತ ಸಂಘದ ವತಿಯಿಂದ ಕೆಎನ್ಎನ್ಎಲ್ ಅಧೀಕ್ಷಕ ಎಂಜಿನಿಯರ್ಗೆ ಮನವಿ ಸಲ್ಲಿಸಲಾಯಿತು.
ಮಳೆ ಕೊರತೆಯ ಹಿನ್ನೆಲೆ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಿದೆ. ಜಲಸಂಪನ್ಮೂಲ ಸಚಿವರು ಜಲಾಶಯದಿಂದ ನೀರನ್ನು ಯಾವುದೇ ಕಾರಣಕ್ಕೂ ಹೊರಗಡೆ ಬಿಡಬಾರದು ಎಂದು ಆದೇಶಿಸಿದ್ದರು. ಆದರೂ ಸರ್ಕಾರದ ಆದೇಶ ಉಲ್ಲಂಘಿಸಿ ನೀರು ಬಿಡುಗಡೆ ಮಾಡಲಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

ಭದ್ರಾ ಜಲಾಶಯದ ಬೀಗಗಳು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಬಳಿ ಇದ್ದು, ಕೂಡಲೇ ಬೀಗಗಳನ್ನು ಕೆಎನ್ಎನ್ಎಲ್ಗೆ ಹಸ್ತಾಂತರಿಸಬೇಕು ಎಂದು ರೈತರು ಒತ್ತಾಯಿಸಿದರು.
ಪ್ರಮುಖರಾದ ಲವಕುಮಾರ್, ನಂದೀಶ್, ಶಶಿ ನೆಲ್ಲಿಸರ, ನಂದ, ಪರಮೇಶ್, ವಿನೋಜಿರಾವ್, ವೆಂಕಟೇಶ್, ಸುಂದರೇಶ್, ಹರಿ ಮತ್ತಿತರರು ಉಪಸ್ಥಿತರಿದ್ದರು.