NEWS HIGHLIGHTS
ರಿಪ್ಪನ್ಪೇಟೆ: ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಮರದ ರೆಂಬೆ ಮುರಿದುಬಿದ್ದು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಹೊಸನಗರ ತಾಲೂಕು ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಿರೇಸಾನಿ ಗ್ರಾಮದಲ್ಲಿ ನಡೆದಿದೆ.
ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ನೀಲಾವತಿ ಬೆಳ್ಳೂರಿನಿಂದ ಸಹಪಾಠಿಗಳ ಜೊತೆಗೆ ಹಿರೇಸಾನಿಗೆ ನಡೆದುಕೊಂಡು ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅವಘಡ ಸಂಭವಿಸಿದೆ.

ಕಾಡಂಚಿನ ರಸ್ತೆಯಲ್ಲಿ ವಿದ್ಯಾರ್ಥಿನಿಯರು ಊರಿಗೆ ಹೋಗುತ್ತಿರುವಾಗ ಗಾಳಿ-ಮಳೆ ಆರಂಭವಾಗಿದೆ. ರಭಸವಾದ ಗಾಳಿಗೆ ರಸ್ತೆ ಪಕ್ಕದಲ್ಲಿದ್ದ ಮರದ ರೆಂಬೆ ಮುರಿದಿದೆ. ಹಠಾತ್ತನೆ ಮುರಿದ ರೆಂಬೆ ವಿದ್ಯಾರ್ಥಿನಿ ಮೇಲೆ ಬಿದ್ದು ನೀಲಾವತಿ ಗಂಭೀರ ಗಾಯಗೊಂಡಿದ್ದಾರೆ. ಪಾಲಕರು ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.