NEWS HIGHLIGHTS
ಶಿವಮೊಗ್ಗ: ತಾಲೂಕಿನ ಸಿರಿಗೆರೆ ಸಮೀಪದ ಹೊಸೂರು ದರ್ಗಾ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮೋರಿಗೆ ಡಿಕ್ಕಿ ಹೊಡೆದು, ದಾವಣಗೆರೆ ಮೂಲದ BSNL ನಿವೃತ್ತ ನೌಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದಾವಣಗೆರೆ ಮೂಲದ ಸುರೇಶ್ (65) ಮೃತ ದುರ್ದೈವಿ. ಚಿಕಿತ್ಸೆಗಾಗಿ ಮಗ ಅಮೃತ್ (36) ಜತೆ ಮಂಗಳೂರು ಆಸ್ಪತ್ರೆಗೆ ತೆರಳಿದ್ದ ಸುರೇಶ್, ದಾವಣಗೆರೆಗೆ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ-ಹಣಗೆರೆ-ಆಯನೂರು-ಸವಳಂಗ ಮಾರ್ಗವಾಗಿ ದಾವಣಗೆರೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮೋರಿಗೆ ಅಪ್ಪಳಿಸಿದೆ.

ಘಟನೆಯಲ್ಲಿ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಚಲಾಯಿಸುತ್ತಿದ್ದ ಮಗ ಅಮೃತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.