ಶಿವಮೊಗ್ಗ: ಮಲ್ಲಿಗೇನಹಳ್ಳಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಸಂಪರ್ಕ ಕಲ್ಪಿಸುವ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ಪರದಾಡುತ್ತಿದ್ದಾರೆ. ತಕ್ಷಣ ಈ ಮಾರ್ಗದಲ್ಲಿ 6 ನಗರ ಸಾರಿಗೆ ಬಸ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಮಲ್ಲಿಗೇನಹಳ್ಳಿಯಲ್ಲಿರುವ ದೇವರಾಜ ಅರಸು ವಿದ್ಯಾರ್ಥಿ ನಿಲಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ನೂರಾರು ವಿದ್ಯಾರ್ಥಿಗಳು ವಾಸವಿದ್ದಾರೆ. ಪ್ರತಿದಿನ ಶಿವಮೊಗ್ಗಕ್ಕೆ ಕಾಲೇಜಿಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಕಾಲದಲ್ಲಿ ತರಗತಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಎಬಿವಿಪಿ ನಗರ ಸಹ ಕಾರ್ಯದರ್ಶಿ ವಿನಯ್ ಹಿರೇಮಲ್ಲ ದೂರಿದ್ದಾರೆ.

ಪರೀಕ್ಷೆ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದ್ದು, ಮಲ್ಲಿಗೇನಹಳ್ಳಿ ಮಾರ್ಗಕ್ಕೆ ಕೂಡಲೇ 6 ಬಸ್‌ಗಳನ್ನು ಬಿಡಬೇಕು ಹಾಗೂ ನಿಗದಿತ ಸಮಯಕ್ಕೆ ಅವು ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಅಂಜನ್ ಹಾಗೂ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಆಕಾಶ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.