ಶಿವಮೊಗ್ಗ: ರೈತ ಪರವಾಗಿ ಇರಬೇಕಾದ ಸರ್ಕಾರವು ತಮಿಳುನಾಡಿನ ಪರವಿದ್ದಂತೆ ವರ್ತಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿಯನ್ನು ಮೆಚ್ಚಿಸಲು ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಏಕಪಕ್ಷೀಯ ತೀರ್ಮಾನವನ್ನು ಖಂಡಿಸಿ ಜುಲೈ 31ರಂದು ಮಂಡ್ಯದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಬೆಕ್ಕಿನಕಲ್ಮಠದಲ್ಲಿ ಗುರುಪೂರ್ಣಿಕೆ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು, ಬಳಿಕ ಮಾಧ್ಯಮಗಳ ಜೊತೆಗೆ ವಿಜಯೇಂದ್ರ ಮಾತನಾಡಿದರು.

ಕಾವೇರಿ ಕೊಳ್ಳದ ರೈತರು ಬಿತ್ತನೆ ಮಾಡಬೇಡಿ ಎಂದು ಇತ್ತೀಚೆಗೆ ಹೇಳಿಕೆ ನೀಡುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಿದ್ದ ಸಿಎಂ, ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಣೆಕಟ್ಟೆಯಲ್ಲಿ ಕೇವಲ 17.39 ಟಿಎಂಸಿ ನೀರಿದ್ದು, ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿದ ನೀರನ್ನು ಹರಿಸಿದರೆ ನಮ್ಮ ರೈತರ ಪರಿಸ್ಥಿತಿ ಏನಾಗಬೇಕು. CWRCಗೆ ಮತ್ತೆ ಅರ್ಜಿ ಸಲ್ಲಿಸಿ ಸಮರ್ಥವಾಗಿ ವಾದ ಮಂಡಿಸಬೇಕೆಂದು ಆಗ್ರಹಿಸಿದರು. ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳುವ ಸಿಎಂ, ಕಾವೇರಿ ವಿಚಾರದಲ್ಲಿ ವಕೀಲರನ್ನು ಕರೆಸಿ ಏಕೆ ಚರ್ಚಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಹೋರಾಟಗಾರರ ದಮನ ಸರಿಯಲ್ಲ
ಬಾಂಗ್ಲಾ ಅಕ್ರಮ ನುಸುಳುಕೋರರ ವಿರುದ್ಧ ಧ್ವನಿ ಎತ್ತಿರುವ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಹಾಗೂ ವೈದ್ಯ ಟಿ. ನಾಗೇಂದ್ರಪ್ಪ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ದೇಶದ್ರೋಹದ ಕೆಲಸ. ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರ ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದು, ಹೋರಾಟಗಾರರನ್ನು ದಮನಿಸುವ ಯತ್ನ ಮಾಡುತ್ತಿದೆ ಎಂದು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯ ನಿವೃತ್ತಿಯ ಹೇಳಿಕೆಯಿಂದಾಗಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ನಿರೀಕ್ಷಿತ ಸ್ಥಾನಗಳು ಕುಸಿಯಲಿವೆ ಎಂದು ವಿಜಯೇಂದ್ರ ತಿಳಿಸಿದರು.