ಶಿವಮೊಗ್ಗ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತದೃಷ್ಟಿಯಿಂದ ಹವಾಮಾನಾಧಾರಿತ ಬೆಳೆ ವಿಮೆ ಪ್ರೀಮಿಯಂ ಪಾವತಿ ಅವಧಿಯನ್ನು ತಕ್ಷಣ ವಿಸ್ತರಿಸುವಂತೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಸಿಎಂಗೆ ರಾಘವೇಂದ್ರ ಪತ್ರ
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಸಂಸದ ರಾಘವೇಂದ್ರ, ರಾಜ್ಯದಲ್ಲಿ ಜುಲೈ ಅಂತ್ಯದ ವೇಳೆಗೆ ವಾಡಿಕೆಗಿಂತ ಶೇ.34ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಶೇ. 44ರಷ್ಟು ಮಳೆ ಕೊರತೆಯಾಗಿದೆ. 2026–27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಡಿಕೆ, ಕಾಳುಮೆಣಸು, ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮೆ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತರಿಗೆ ನಿಗದಿತ ಅವಧಿಯೊಳಗೆ ಪ್ರೀಮಿಯಂ ಪಾವತಿಸುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಮಳೆ ಮಾಪನ ಕೇಂದ್ರಗಳ ಸಮಸ್ಯೆ
ಜಿಲ್ಲೆಯಲ್ಲಿ ಮಳೆಮಾಪನ ಕೇಂದ್ರಗಳ ಸಮಸ್ಯೆ ಇದ್ದು, ಒಟ್ಟು 280 ಕೇಂದ್ರಗಳ ಪೈಕಿ 205 ಯಂತ್ರಗಳು ಈಗ ಕಾರ್ಯನಿರ್ವಹಿಸುತ್ತಿವೆ. ಉಳಿದ 41 ಯಂತ್ರಗಳನ್ನು ಆಗಸ್ಟ್ 5ರೊಳಗೆ ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಾರಿ ರೈತರು ತಾವು ಸಾಲ ಪಡೆದಿರುವ ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲೇ ಪ್ರೀಮಿಯಂ ಪಾವತಿಸಬೇಕಿರುವುದರಿಂದ ಸರ್ವರ್ ದೋಷ ಹಾಗೂ ತಾಂತ್ರಿಕ ತೊಂದರೆಗಳಿಂದ ಬ್ಯಾಂಕ್‌ಗಳಲ್ಲಿ ಕ್ಯೂ ಹೆಚ್ಚಾಗಿದೆ ಎಂದು ಪತ್ರದಲ್ಲಿ ರಾಘವೇಂದ್ರ ಉಲ್ಲೇಖಿಸಿದ್ದಾರೆ.
ರೈತರು ವಿಮಾ ಸೌಲಭ್ಯದಿಂದ ವಂಚಿತರಾಗದಂತೆ ಬೆಳೆ ವಿಮೆ ಪ್ರೀಮಿಯಂ ಪಾವತಿಸಲು ಕನಿಷ್ಠ ಕೆಲವು ವಾರಗಳವರೆಗೆ ಅವಧಿಯನ್ನು ವಿಸ್ತರಿಸಬೇಕು ಎಂದು ಸಂಸದ ರಾಘವೇಂದ್ರ ಆಗ್ರಹಿಸಿದ್ದಾರೆ.