ಶಿವಮೊಗ್ಗ: ತಾಲ್ಲೂಕಿನ ಶಿವಮೊಗ್ಗ-ಹೊನ್ನಾಳಿ ರಸ್ತೆಯ ತ್ಯಾವರೆಚಟ್ನಳ್ಳಿ ಪೆಟ್ರೋಲ್ ಬಂಕ್ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ವ್ಯಕ್ತಿಯೊಬ್ಬ ಕಲ್ಲು ತೂರಾದಾನೆ. ಘಟನೆಯಲ್ಲಿ ಬಸ್ಸಿನ ಮುಂಭಾಗದ ಗಾಜು ಬಿರುಕು ಬಿಟ್ಟಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ಸಿಗೆ ರಸ್ತೆ ಬದಿ ತೆರಳುತ್ತಿದ್ದ ಶಿವಮೊಗ್ಗದ ರಾಗಿಗುಡ್ಡದ ಪವನ್ ಎಂಬಾತ ಏಕಾಏಕಿ ಕಲ್ಲು ತೂರಿದ್ದಾನೆ. ಇದರಿಂದ ಬಸ್ಸಿನ ಮುಂಭಾಗದ ಗಾಜು ಒಡೆದು ಅಂದಾಜು ₹20,000 ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕೂಡಲೆ ಬಸ್ ನಿಲ್ಲಿಸಿ ಪವನ್ನನ್ನು ಹಿಡಿದು ಪ್ರಶ್ನಿಸಿದಾಗ ಚಾಲಕ, ನಿರ್ವಾಹಕರಿಗೆ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಚಾಲಕ ಶಂಕರಪ್ಪ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.