ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರು ಆಗಸ್ಟ್ 7ರಿಂದ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಅವರಿಗೆ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಮಧು ಬಂಗಾರಪ್ಪ ಅವರಿಗೆ ಪಕ್ಷದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಗುವುದು. ಆಗಸ್ಟ್ 7 ರಿಂದ 11 ರವರೆಗೆ ಜಿಲ್ಲೆಯ ಸೊರಬ, ಶಿವಮೊಗ್ಗ ಸೇರಿದಂತೆ ವಿವಿಧ ತಾಲ್ಲೂಕುಗಳ ನೆರೆ ಹಾಗೂ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪ್ರವಾಸದ ವೇಳೆ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಾನಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಸಾಧನೆಗಳ ಶ್ಲಾಘನೆ, ಪ್ರವಾಸದ ವಿವರ
ಮಧು ಬಂಗಾರಪ್ಪ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ದೊರೆತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಸಾವಿರಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳಿಗೆ ಅನುಮೋದನೆ, ನಮ್ಮೂರು-ನಮ್ಮ ಶಾಲೆ ಅಭಿಯಾನ ಮತ್ತು ಸಿಎಸ್ಆರ್ ನಿಧಿ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಮೂಲಕ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದರು ಎಂದು ಪ್ರಸನ್ನ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಎಂ.ಎಸ್. ಶಿವಕುಮಾರ್, ಶಿವಣ್ಣ, ಕಲಿಂಪಾಷಾ, ಎಸ್.ಟಿ. ಹಾಲಪ್ಪ, ಜಿ.ಡಿ.ಮಂಜುನಾಥ್, ಶ್ವೇತಾಬಂಡಿ, ಸ್ಟೆಲಾ ಮಾರ್ಟಿನ್, ವಿಜಯಲಕ್ಷ್ಮೀ ಪಾಟೀಲ್, ಅರ್ಚನಾ ನಿರಂಜನ್ ಉಪಸ್ಥಿತರಿದ್ದರು.