ಶಿವಮೊಗ್ಗ: ಸುಸಜ್ಜಿತ ಶ್ರೀ ಕಂಠೀರವ ಸ್ಟೂಡಿಯೋ ಶಾಖೆ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ವೇದಿಕೆ ಸಜ್ಜಾಗಿದೆ. ಈ ಸಂಬಂಧ ಶಿವಮೊಗ್ಗ ತಾಲೂಕಿನ ತ್ಯಾಜುವಳ್ಳಿ ಗ್ರಾಮದಲ್ಲಿ ಜಮೀನು ಪರಿಶೀಲನೆ ನಡೆಸಲಾಗಿದೆ ಎಂದು ಸ್ಟುಡಿಯೊ ಅಧ್ಯಕ್ಷ ಮಹಬೂಬ್ ಪಾಷ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.
ತ್ಯಾಜುವಳ್ಳಿಯ ಸರ್ವೆ ನಂ.60 ಮತ್ತು 27ರಲ್ಲಿರುವ ಜಾಗವನ್ನು ಪರಿಶೀಲಿಸಿದ ನಂತರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ಜಮೀನು ಯೋಜನೆಗೆ ಸೂಕ್ತವಾಗಿದ್ದು, ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

##ಹೇಗಿರುತ್ತೆ ಸ್ಟೂಡಿಯೋ? ಇಲ್ಲಿದೆ ಪಾಯಿಂಟ್ಸ್

ಸ್ಟುಡಿಯೋಗಾಗಿ ಕನಿಷ್ಠ 25 ಎಕರೆ ಜಮೀನಿನ ಬೇಡಿಕೆ ಇದೆ. ಸ್ಥಳ ಲಭ್ಯತೆಗೆ ಅನುಗುಣವಾಗಿ ಕಿರು ಫಿಲ್ಮ್ ಸಿಟಿ ನಿರ್ಮಿಸಲಾಗುವುದು.

ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ. ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಅಲೆಯುವ ಅನಿವಾರ್ಯತೆ ತಪ್ಪಲಿದ್ದು, ಸಮಯ ಮತ್ತು ವೆಚ್ಚ ಉಳಿತಾಯವಾಗಲಿದೆ.

ತ್ಯಾಜುವಳ್ಳಿಯ ತಾಣವು ಹೊರಾಂಗಣ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದ್ದು, ಒಳಾಂಗಣ ಸೆಟ್ಗಳನ್ನೂ ನಿರ್ಮಿಸಿ ಒಂದೇ ಸೂರಿನಡಿ ಸಕಲ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ.

ಕಂದಾಯ ಇಲಾಖೆಯು ಶೀಘ್ರವೇ ಜಮೀನು ಮಂಜೂರಾತಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದು, ಬಳಿಕ ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಹಬೂಬ್ ಪಾಷ ಮಾಹಿತಿ ನೀಡಿದ್ದಾರೆ.
ಜಮೀನು ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ಸತ್ಯನಾರಾಯಣ.ಜಿ.ಎಸ್, ತಹಶೀಲ್ದಾರ್ ರಾಜೀವ್ ಕುಮಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.