ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸುತ್ತಿದ್ದ ವೇಳೆ ಎಐಸಿಸಿ ವೀಕ್ಷಕರ ಎದುರಲ್ಲೇ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಗಲಾಟೆಯಿಂದ ಕೆಲಕಾಲ ಕಚೇರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಎಐಸಿಸಿ ವೀಕ್ಷಕ ಶರತ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಬೆಳಿಗ್ಗೆ ಉತ್ತರ ಬ್ಲಾಕ್ ಕಾರ್ಯಕರ್ತರ ಅಭಿಪ್ರಾಯ ಪಡೆಯಲಾಗಿದ್ದು, ಸಂಜೆ ದಕ್ಷಿಣ ಬ್ಲಾಕ್ ಕಾರ್ಯಕರ್ತರ ಸಭೆ ನಡೆಯುತ್ತಿದ್ದ ವೇಳೆ ಈ ಗಲಾಟೆ ಸಂಭವಿಸಿದೆ.

ಗಲಾಟೆಗೆ ಕಾರಣವೇನು?
ಸಭಾಂಗಣದ ಒಳಗೆ ಪ್ರವೇಶಿಸುವ ವಿಚಾರ ಹಾಗೂ ವೀಕ್ಷಕರಿಗೆ ಅಭಿಪ್ರಾಯ ತಿಳಿಸುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಮನಸ್ತಾಪ ಉಂಟಾಗಿದೆ. ಈ ವಾಗ್ವಾದವು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಎಐಸಿಸಿ ವೀಕ್ಷಕ ಶರತ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಅವರ ಸಮ್ಮುಖದಲ್ಲೇ ಕುರ್ಚಿಗಳನ್ನು ಒಡೆದುಹಾಕಲಾಗಿದೆ.
ಕಚೇರಿಯ ಒಳಗಡೆ ಆರಂಭವಾದ ಈ ನೂಕಾಟ, ತಳ್ಳಾಟ ಮತ್ತು ಗಲಾಟೆ ಹೊರಭಾಗದಲ್ಲೂ ಮುಂದುವರಿಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಜಯನಗರ ಠಾಣೆ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದು, ಗುಂಪು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೆಳಗಿದೆ ವಿಡಿಯೋ