ಶಿವಮೊಗ್ಗ: ಸಚಿವರಾಗಿ ಮಧು ಬಂಗಾರಪ್ಪ ಸಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾ ಪ್ರವಾಸ ಕೈಗೊಂಡು, ಅತಿವೃಷ್ಟಿ, ಅನಾವೃಷ್ಟಿಯ ಪರಿಶೀಲನೆ ಶುರು ಮಾಡಿದ್ದಾರೆ. ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಎರಡನೇ ಅವಧಿಯಲ್ಲಿ ಮಧು ಬಂಗಾರಪ್ಪ ಅವರ ನಡೆ, ನುಡಿಯಲ್ಲಿ ಹಿಂದಿಗಿಂತಲೂ ಗಂಭೀರತೆ ಕಾಣುತ್ತಿದೆ. ಹಾಗೆಯೇ ಮೊದಲ ಅವಧಿಗಿಂತಲು ಪರಿಸ್ಥಿತಿ ವಿಭಿನ್ನವಾಗಿದೆ. ಈ ಬಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಸಾಲು ಸಾಲು ಸವಾಲುಗಳು ಎದುರಾಗಿವೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಮಿನಿಸ್ಟರ್‌ಗೆ ಏನೆಲ್ಲ ಸವಾಲುಗಳಿವೆ?
ಸವಾಲು 1: ಮತ್ತಷ್ಟು ಸುಡಲಿದೆ ಬಂಡಾಯದ ಬಿಸಿ
ಸಚಿವ ಸ್ಥಾನದ ಸಕೆಂಡ್ ಇನ್ನಿಂಗ್ಸ್‌ನ ಆರಂಭದಲ್ಲೇ ಮಧು ಬಂಗಾರಪ್ಪ ಅವರಿಗೆ ಬಂಡಾಯದ ಬಿಸಿ ತಟ್ಟಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಸಿಟ್ಟಾಗಿದ್ದಾರೆ. ಮಧು ಬಂಗಾರಪ್ಪ ಅವರ ವಿರುದ್ಧ ನೇರಾನೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾವತಿ ಶಾಸಕ ಸಂಗಮೇಶ್ವರ ಅವರ ಸಿಟ್ಟು ಆ ಕ್ಷೇತ್ರಕ್ಕೆ ಸೀಮಿತವಾದರೆ, ಬೇಳೂರು ಗೋಪಾಲಕೃಷ್ಣಾ ಅವರ ಆಕ್ರೋಶದ ಕಾವು ಸಾಗರ ಕ್ಷೇತ್ರದ ಹೊರಗು ಮಧು ಬಂಗಾರಪ್ಪ ಅವರಿಗೆ ತಟ್ಟುವ ಸಾಧ್ಯತೆ ಇದೆ. ಹಾಗಾಗಿ ಬಂಡಾಯದ ಬಿಸಿಯನ್ನು ತಣ್ಣಾಗಾಗಿಸುವುದೇ ದೊಡ್ಡ ಸವಾಲಾಗಿದೆ.

ಸವಾಲು 2: ಸಾಲು ಸಾಲು ಚುನಾವಣೆಗಳು
ಸಚಿವ ಸ್ಥಾನ ಕೈತಪ್ಪಿದಾಗ ಸಚಿವಾಕಾಂಕ್ಷಿ ಶಾಸಕರು ಶಿವಮೊಗ್ಗದ ಕಳೆದ ಲೋಕಸಭೆ ಚುನಾವಣೆಯ ಸೋಲು ಮತ್ತು ಅದರ ಹೊಣೆಗಾರಿಕೆಯ ಪ್ರಶ್ನೆ ಎತ್ತಿದ್ದರು. ಈಗ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ತಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ಸಿಗುವುದೇ ಇಲ್ಲಿ. ಬಿಜೆಪಿ ಈಗಾಗಲೇ ಚುನಾವಣೆಗೆ ಸಿದ್ಧವಾಗಿ ಕಾಯುತ್ತಿದೆ. ಇತ್ತ ಕಾಂಗ್ರೆಸ್ ಪಕ್ಷವನ್ನು ಅಖಾಡಕ್ಕಿಳಿಸಲು ಸನ್ನದ್ಧಗೊಳಿಸುವ ಜವಾಬ್ದಾರಿ, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರದ್ದೇ ಹೊಣೆಯಾಗಲಿದೆ.
ಸಾವಲು 3: ಪಕ್ಷ ಸಂಘಟನೆ
ಎರಡು ದಿನದ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಸಭೆ ವೇಳೆ ಎಐಸಿಸಿ ವೀಕ್ಷಕರ ಎದುರಲ್ಲೇ ಕಾರ್ಯಕರ್ತರು ಬಡಿದಾಡಿಕೊಂಡಿದ್ದರು. ಪಕ್ಷದೊಳಗಿನ ಬಣ ರಾಜಕೀಯಕ್ಕೆ ಇದೊಂದು ನಿದರ್ಶನ. ಹೀಗೆ ಕಾಂಗ್ರೆಸ್ ಪಕ್ಷ ಮನೆಯೊಂದು ಹಲವು ಬಾಗಿಲು ಎಂಬಂತಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷವನ್ನು ಸಂಘಟಿಸುವುದು ಒಂದು ಸವಾಲಾದರೆ, ಜಿಲ್ಲಾಧ್ಯಕ್ಷರ ಆಯ್ಕೆಯ ವಿಷಯದಲ್ಲೂ ಮೇಲಾಟಗಳು ನಡೆಯುತ್ತಿರುವುದು ರಹಸ್ಯವೇನಲ್ಲ. ಇವುಗಳ ಆಚೆಗೆ ಸಚಿವ ಮಧು ಬಂಗಾರಪ್ಪ ಅವರು ಪಕ್ಷ ಸಂಘಟನೆ ಮಾಡಿಕೊಂಡು, ಚುನಾವಣಾ ಕಣಕ್ಕೆ ಇಳಿಯಬೇಕಿದೆ.
ಸವಾಲು 4: ಖಾತೆ ಯಾವುದು?
ಮಧು ಬಂಗಾರಪ್ಪ ಸೇರಿ 19 ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಸದ್ಯ ಮಧು ಬಂಗಾರಪ್ಪ ಅವರಿಗೆ ಶಿಕ್ಷಣ ಇಲಾಖೆ ಖಾತೆಯನ್ನೇ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಹಳೆಯ ಖಾತೆಯನ್ನೇ ಕೊಟ್ಟರೆ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನಿಭಾಯಿಸುವುದು ಕಷ್ಟವೇನಲ್ಲ. ಹೊಸ ಖಾತೆ ನೀಡಿದರೆ ಆ ಇಲಾಖೆಯ ಆಳ, ಅಗಲ ತಿಳಿಯಲು ಸಮಯ ಹಿಡಿಯಲಿದೆ. ಆಗ ಜಿಲ್ಲೆಯ ಪಕ್ಷ ಸಂಘಟನೆಯ ಜವಾಬ್ದಾರಿ ನಿರ್ವಹಿಸುವುದಕ್ಕೆ ಅಡ್ಡಿ ಆಗಲಿದೆ.
ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿ, ಶರಾವತಿ ಸಂತ್ರಸ್ತರು, ಮಳೆ ಹಾನಿ, ನೀರಾವರಿ ಯೋಜನೆಗಳು ಸೇರಿದಂತೆ ಜ್ವಲಂತ ಸಮಸ್ಯೆಗಳು ಹಲವಿವೆ. ಇವುಗಳಿಗೆ ಮದ್ದು ನೀಡಿ, ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ಪ್ರಮುಖ ಜವಾಬ್ದಾರಿ ಮಧು ಬಂಗಾರಪ್ಪ ಅವರ ಮೇಲಿದೆ. ಹಾಗಾಗಿ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಬಾರಿ ಸಾಲು ಸಾಲು ಸವಾಲುಗಳಿವೆ.