ಶಿವಮೊಗ್ಗ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಚುಂಚಾದ್ರಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 24ನೇ ವರ್ಷದ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿಯು ಆಗಸ್ಟ್ 13 ಮತ್ತು 14 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲೆ ದಿವ್ಯ ಕರಣಂ ತಿಳಿಸಿದರು.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿವ್ಯ ಕರಣಂ, ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿರುವ ಈ ಪಂದ್ಯಾವಳಿಯು ನೆಹರು ಕ್ರೀಡಾಂಗಣದ ಹೊರಾಂಗಣ ಮತ್ತು ಒಳಾಂಗಣ ಹಾಗೂ ಆದಿಚುಂಚನಗಿರಿ ಕ್ರೀಡಾಂಗಣ ಸೇರಿ ಒಟ್ಟು 8 ಅಂಕಣಗಳಲ್ಲಿ ಜರುಗಲಿವೆ. ಮಹಿಳೆಯರಿಗಾಗಿ ಆದಿಚುಂಚನಗಿರಿ ಶಾಲೆಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಪುರುಷರ ಹಾಗೂ ಅಂತಿಮ ಪಂದ್ಯಾವಳಿಗಳು ನೆಹರು ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದರು.

ಈ ಪಂದ್ಯಾವಳಿಯಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನುರಿತ ತೀರ್ಪುಗಾರರು ಭಾಗವಹಿಸಲಿದ್ದು, ಇದೇ ಮೊದಲ ಬಾರಿ ನೂರು ತಂಡಗಳು ಭಾಗವಹಿಸುತ್ತಿವೆ. 63 ಬಾಲಕರ ತಂಡ ಹಾಗೂ 37 ಬಾಲಕಿಯರ ತಂಡಗಳು ಪಾಲ್ಗೊಳ್ಳುತ್ತಿವೆ. ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ನಿಗದಿಪಡಿಸಲಾಗಿದೆ. ಪ್ರಥಮ ಸ್ಥಾನ ₹5000 ನಗದು ಬಹುಮಾನ, ದ್ವಿತೀಯ ಸ್ಥಾನ ₹4000, ತೃತೀಯ ಸ್ಥಾನ ₹3000, ನಾಲ್ಕನೇ ಸ್ಥಾನ ₹2000, ವೈಯಕ್ತಿಕ ಪ್ರಶಸ್ತಿಗಳು ಬೆಸ್ಟ್ ಅಟ್ಯಾಕರ್, ಬೆಸ್ಟ್ ಬ್ಲಾಕರ್ ಹಾಗೂ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಗಳು ಇರಲಿವೆ ಎಂದರು.
ರಸ್ತೆ ಓಟ ಸ್ಪರ್ಧೆ
ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಖಜಾಂಚಿ ಉದಯ್ ಮಾತನಾಡಿ, ಚುಂಚಾದ್ರಿ ಕಪ್ ಪಂದ್ಯಾವಳಿ ಅಂಗವಾಗಿ ಆಗಸ್ಟ್ 14ರಂದು ಬೆಳಿಗ್ಗೆ 6 ಗಂಟೆಗೆ ನೆಹರು ಕ್ರೀಡಾಂಗಣದಿಂದ ರಸ್ತೆ ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಾಥಮಿಕ ಬಾಲಕ, ಬಾಲಕಿಯರಿಗೆ 2 ಕಿ.ಮೀ, ಪ್ರೌಢಶಾಲಾ ಬಾಲಕಿಯರಿಗೆ 3 ಕಿ.ಮೀ ಹಾಗೂ ಬಾಲಕರಿಗೆ 5 ಕಿ.ಮೀ ಓಟವಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆ ಹಾಗೂ ಜಿಲ್ಲೆಯ ಹೊರಗಿನ ಆಟಗಾರರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ ಮತ್ತು ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಭಾಸ್ಕರ್ ಜಿ. ಕಾಮತ್, ಕೊಳಗೆ ವಾಸಪ್ಪಗೌಡ, ಉದಯ್ಕುಮಾರ್, ಮಠಪತಿ ಹಾಗೂ ಸುರೇಶ್ ಉಪಸ್ಥಿತರಿದ್ದರು.