ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ರೈಲ್ವೆ ಪ್ರಯಾಣಿಕರನ್ನು ಕರೆದೊಯ್ಯುವ ವಿಚಾರವಾಗಿ ರೈಲ್ವೆ ನಿಲ್ದಾಣದ ಆಟೋ ಚಾಲಕರು ಮತ್ತು ಖಾಸಗಿ ಬಸ್ ಸಿಬ್ಬಂದಿ ನಡುವೆ ಸಂಘರ್ಷ ತಾರಕಕ್ಕೇರಿದೆ. ಖಾಸಗಿ ಬಸ್ಗಳು ನಿಲ್ದಾಣದ ಸಮೀಪ ಬಂದು ನಿಲ್ಲುತ್ತಿರುವುದನ್ನು ವಿರೋಧಿಸಿ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿ, ದಿಢೀರ್ ಪ್ರತಿಭಟನೆ ನಡೆಸಿದರು. ಇದರಿಂದ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇಂದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಆಟೋ ಚಾಲಕರ ಆಗ್ರಹವೇನು? ಇಲ್ಲಿದೆ ಪಾಯಿಂಟ್ಸ್

ಈ ಹಿಂದೆ ಅಧಿಕಾರಿಗಳ ಸಭೆಯಲ್ಲಿ, ಖಾಸಗಿ ಬಸ್ಗಳು ರೈಲ್ವೆ ನಿಲ್ದಾಣದಿಂದ ದೂರದಲ್ಲಿ ನಿಲ್ಲುವಂತೆ ಸ್ಥಳ ನಿಗದಿಪಡಿಸಿ ಸೂಚನೆ ನೀಡಲಾಗಿತ್ತು.


ನಿಯಮ ಮೀರಿ ಖಾಸಗಿ ಬಸ್ಸುಗಳು ರೈಲ್ವೆ ನಿಲ್ದಾಣದ ಪ್ರಿ-ಪೇಡ್ ಆಟೋ ಕೇಂದ್ರದ ಬಳಿ ಬಂದು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮುಂದಾಗಿವೆ. ಹಾಗಾಗಿ ಕ್ಯೂನಲ್ಲಿದ್ದ ಆಟೋ ಚಾಲಕರು ಬಸ್ಸನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಕ್ಯೂನಲ್ಲಿ ಗಂಟೆಗಟ್ಟಲೆ ಕಾಯ್ದು ಕಡಿಮೆ ಬಾಡಿಗೆಗೆ ಸೇವೆ ಒದಗಿಸುತ್ತಿರುವ ತಮ್ಮ ಹೊಟ್ಟೆಯ ಮೇಲೆ, ಬಸ್ ಮಾಲೀಕರು ಹಾಗೂ ಹೊರಗಿನ ಆಟೋಗಳು ಕನ್ನ ಹಾಕುತ್ತಿದ್ದಾರೆ ಎಂದು ಆಟೋ ಚಾಲಕರು ದೂರಿದರು.
ಅಧಿಕಾರಿಗಳ ಮಧ್ಯ ಪ್ರವೇಶ, ಪರಿಸ್ಥಿತಿ ತಿಳಿ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್, ಆರ್.ಟಿ.ಒ. ಹಿರಿಯ ಇನ್ಸ್ಪೆಕ್ಟರ್ ಮಲ್ಲೇಶಪ್ಪ ಹಾಗೂ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ರವಿ ಪಾಟೀಲ್ ಅವರು ಆಟೋ ಚಾಲಕರೊಂದಿಗೆ ಚರ್ಚೆ ನಡೆಸಿ ಮನವೊಲಿಸಲು ಯತ್ನಿಸಿದರು.
ಬಸ್ ಮಾಲಿಕರ ವಿರುದ್ಧ ಕ್ರಮಕ್ಕೆ ಆಟೋ ಚಾಲಕರು ಪಟ್ಟು ಹಿಡಿದು ವಾಗ್ವಾದ ನಡೆಸಿದರು. ಕೊನೆಗೆ ಅಧಿಕಾರಿಗಳು ಬಸ್ ನಿಲುಗಡೆಗೆ ಸೂಕ್ತ ಸ್ಥಳ ಸೂಚಿಸಿ ಹಾಗೂ ಆಟೋ ಚಾಲಕರಿಗೂ ನಿಯಮ ಪಾಲಿಸುವಂತೆ ನಿರ್ದೇಶನ ನೀಡಿದರು. ಇದರಿಂದ ಪರಿಸ್ಥಿತಿ ತಿಳಿಯಾಯಿತು.