ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸುವರ್ಣ ಮಹೋತ್ಸವದ ಅಂಗವಾಗಿ, ಶಿವಮೊಗ್ಗದಲ್ಲಿ ದಿವ್ಯ ಸಂಜೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಪ್ರಮುಖ ಮಾಹಿತಿ ನೀಡಿದರು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಶ್ರೀಗಳು ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

ಅಧ್ಯಾತ್ಮವೇ ಭಾರತದ ಶಕ್ತಿ. ಈ ಅಧ್ಯಾತ್ಮದ ಶಕ್ತಿಯ ಮೂಲಕವೇ ದೇಶವು ವಿಶ್ವಗುರುವಾಗಲು ಸಾಧ್ಯವಿದೆ. ಹಣವನ್ನೇ ಯಶಸ್ಸಿನ ಮಾನದಂಡವನ್ನಾಗಿ ಮಾಡಿಕೊಂಡಿರುವುದು ಸಮಾಜದ ಪ್ರಮುಖ ಸಮಸ್ಯೆಗಳಿಗೆ ಕಾರಣವಾಗಿದೆ. ಸಕ್ಸಸ್ ಅಂದರೆ ಹಣ ಎನ್ನುವ ಸೂತ್ರವೇ ತಪ್ಪು. ನಿಸ್ವಾರ್ಥ ಸೇವಾ ಮನೋಭಾವ ಇಲ್ಲದ ಶಿಕ್ಷಣಕ್ಕೆ ಯಾವುದೇ ಅರ್ಥವಿಲ್ಲ.


ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ನೋಡಿ ಮನಸ್ಸು ಕಲಕುತ್ತದೆ. ಜೀವನದ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಶಿಕ್ಷಣ ನೀಡದ ಹೊರತು ಈ ಪರಿಸ್ಥಿತಿ ಬದಲಾಗದು. ಎಲ್ಲರೂ ವೈದ್ಯರೇ ಆಗಬೇಕು ಎನ್ನುವ ಒತ್ತಡಕ್ಕಿಂತ, ಮಕ್ಕಳಲ್ಲಿರುವ ಸಹಜ ಪ್ರತಿಭೆಯನ್ನು ಗುರುತಿಸಿ ಬೆಳೆಯಲು ಅವಕಾಶ ಕಲ್ಪಿಸಬೇಕು.

ಭಾರತೀಯರ ವಸುಧೈವ ಕುಟುಂಬಕಂ ಪರಿಕಲ್ಪನೆಯಲ್ಲಿ ಭೂಮಿ, ನೀರು, ಗಾಳಿ, ಆಕಾಶ, ಮಣ್ಣು ಹಾಗೂ ವನ್ಯಜೀವಿಗಳು ಸಹ ನಮ್ಮ ಕುಟುಂಬದ ಭಾಗವಾಗಿವೆ. ಇದೇ ಆಶಯದೊಂದಿಗೆ ವಕೀಲರ ಸಂಘದ ಸಹಯೋಗದಲ್ಲಿ ರಾಜ್ಯದಲ್ಲಿ 5 ಕೋಟಿ ಸಸ್ಯಗಳನ್ನು ನೆಡುವ ಸಂಕಲ್ಪ ಮಾಡಿದ್ದೇವೆ.

ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲವು 2019ರಿಂದ ಸೊರಬ ತಾಲೂಕಿನ ಕಮರೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಮತ್ತು ಬಡ ಕುಟುಂಬಗಳ ಸುಮಾರು 200 ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸಾಯಿ ಸ್ವಾಸ್ಥ್ಯ ವೆಲ್ನೆಸ್ ಸೆಂಟರ್ ಮೂಲಕ ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಲಾಯಿತು.
ನಟ ನೀರ್ನಳ್ಳಿ ರಾಮಕೃಷ್ಣ ಅವರು ಸದ್ಗುರು ಅವರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ವಿದ್ಯಾರ್ಥಿ ಸಚಿನ್ ಹಾಗೂ ಗುರುಕುಲದ ಪ್ರಧಾನ ಪಾಲಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.