ಹೊಟೇಲ್‌ಗಳ ಮೇಲೆ ದಿಢೀರ್‌ ದಾಳಿ, ಜ್ಯೂಸ್‌ ಸೆಂಟರ್‌ನಲ್ಲಿ ಕೊಳೆತ ಹಣ್ಣುಗಳ ರಾಶಿ, ಎಲ್ಲೆಲ್ಲಿ ನಡೆಯಿತು ಚೆಕಿಂಗ್?

ಶಿವಮೊಗ್ಗ: ನಗರದ ತಿಲಕ್‌ನಗರದಲ್ಲಿರುವ ಮಾಂಸಾಹಾರಿ ಹೊಟೇಲ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಏನೆಲ್ಲ ಎಚ್ಚರಿಕೆ ನೀಡಿದರು?

ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಪೂರೈಸದಿದ್ದರೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇದ್ದರೆ ಹೊಟೇಲ್ ಪರವಾನಗಿ ರದ್ದುಗೊಳಿಸುವುದಾಗಿ ಎಚ್ಚರಿಸಲಾಗಿದೆ. ಹೊಟೇಲ್‌ನಲ್ಲಿದ್ದ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Shimoga-Assistant-Commissioner-Dr-Mythri-checks-hotels-and-juice-centers

ಆಹಾರ ತಯಾರಿಕೆಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಅಥವಾ ಕೃತಕ ಬಣ್ಣಗಳ ಬಳಕೆ ಕಂಡುಬಂದಲ್ಲಿ ಪರವಾನಗಿ ರದ್ದುಗೊಳಿಸುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಎಲ್ಲೆಲ್ಲಿ ನಡೆಯಿತು ಚೆಕಿಂಗ್‌?

ಜಿಲ್ಲಾಧಿಕಾರಿ ಕಚೇರಿ ಎದುರು ತಿಲಕನಗರದಲ್ಲಿರುವ ಮಾಂಸಾಹಾರಿ ಹೊಟೇಲ್‌ಗಳಲ್ಲಿ ದಿಢೀರ್‌ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭ ಕೆಲವು ಹೊಟೇಲ್‌ಗಳ ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದು ಬೆಳಕಿಗೆ ಬಂದಿದೆ. ಒಂದು ಹೊಟೇಲ್‌ನಲ್ಲಿ ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ಉಪ ವಿಭಾಗಾಧಿಕಾರಿ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜ್ಯೂಸ್‌ ಸೆಂಟರ್‌ನಲ್ಲಿ ಕೊಳೆತ ಹಣ್ಣುಗಳು

ತಿಲಕನಗರದ ತನು ಜ್ಯೂಸ್‌ ಸೆಂಟರ್‌ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು ಫ್ರೀಜರ್‌ನಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಹಣ್ಣುಗಳನ್ನು ವಶಕ್ಕೆ ಪಡೆದು, ಜ್ಯೂಸ್‌ ಸೆಂಟರ್‌ನ ಲೈಸೆನ್ಸ್‌ ರದ್ದುಗೊಳಿಸುವುದಾಗಿ ಉಪ ವಿಭಾಗಾಧಿಕಾರಿ ತಿಳಿಸಿದರು. ಇಲ್ಲಿದೆ ವಿಡಿಯೋ

ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್‌, ತಹಶೀಲ್ದಾರ್‌ ರಾಜೀವ್‌, ಕಂದಾಯಾಧಿಕಾರಿ ಸತೀಶ್‌, ಕಂದಾಯ ನಿರೀಕ್ಷಕ ಹೊತ್ತಾರೆ ಶಿವಕುಮಾರ್‌, ದೀಪಕ್‌.ಬಿ, ವಿನಾಯಕಸ್ವಾಮಿ.ಜಿ.ಎಂ, ನಿಂಗರಾಜಪ್ಪ ಹಾಗೂ ಮೋಹನ್‌ಕುಮಾರ್‌ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.