ಐದೂವರೆ ಗಂಟೆ ತಡವಾಗಿ ಬೆಂಗಳೂರು ತಲುಪಿದ ಇಂಟರ್‌ಸಿಟಿ, ಹಲವರಿಗೆ ಸಂಕಷ್ಟ, ಕೆಲವರಿಗೆ ಅನುಕೂಲ, ಹೇಗದು?

ರೈಲ್ವೆ ಸುದ್ದಿ: ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ನಿಗದಿಂತಲು ಐದೂವರೆ ಗಂಟೆ ತಡವಾಗಿ ಬೆಂಗಳೂರು ತಲುಪಿದೆ. ಅರಸಾಳು ಸಮೀಪ ರೈಲ್ವೆ ಹಳಿ ಮೇಲೆ ಮರ ಬಿದ್ದಿದ್ದರಿಂದ ಈ ರೈಲು ಸಂಚಾರದಲ್ಲಿ ವಿಳಂಬವಾಗಿತ್ತು.

12 ಗಂಟೆ ಸಂಚಾರ

ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು ತಾಳಗುಪ್ಪದಿಂದ ಮಂಗಳವಾರ ಬೆಳಿಗ್ಗೆ 5:20ಕ್ಕೆ ಹೊರಟಿತ್ತು. ಅದು ಬೆಂಗಳೂರು ತಲುಪುವ ಹೊತ್ತಿಗೆ ಸಮಯ ಸಂಜೆ 5:39 ಆಗಿತ್ತು. ಬೆಳಿಗ್ಗೆ ಆನಂದಪುರ ನಿಲ್ದಾಣ ದಾಟಿ ಸ್ವಲ್ಪ ದೂರ ಸಾಗುತ್ತಿದ್ದಂತೆ ರೈಲು ನಿಂತಿತು. ಅರಸಾಳು ಬಳಿ ರೈಲ್ವೆ ಹಳಿ ಮೇಲೆ ಮರ ಬಿದ್ದಿತ್ತು. ರೈಲ್ವೆ ವಿದ್ಯುತ್‌ ಲೇನ್‌ ಕೂಡ ತುಂಡಾಗಿತ್ತು. ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಎಲೆಕ್ಟ್ರಿಕ್‌ ಇಂಜಿನ್‌ ಜೋಡಿಸಿದ್ದರಿಂದ ಕಡಿತವಾಗಿದ್ದ ವಿದ್ಯುತ್‌ ಲೇನ್‌ ರಿಪೇರಿ ಆಗುವ ತನಕ ರೈಲು ಮುಂದೆ ಸಾಗಲು ಸಾದ್ಯವಾಗಲಿಲ್ಲ.

Talaguppa-Bangalore-Intercity-Train-Stopped-for-three-hours-at-kenchanala-halt

ಪ್ರಯಾಣಿಕರಿಗೆ ನೆರವಾದ ಗ್ರಾಮಸ್ಥರು

ಕೆಂಚನಾಲ ಹಾಲ್ಟ್‌ ಭಾಗದಲ್ಲಿ ರೈಲು ಸುಮಾರು ನಾಲ್ಕೂವರೆ ಗಂಟೆ ನಿಂತ್ತಿತ್ತು. ಬಹುತೇಕ ಪ್ರಯಾಣಿಕರು ಹಸಿವಿನಿಂದ ಬಳಲುತ್ತಿದ್ದರು. ಈ ಸಂದರ್ಭ ಸುತ್ತಮುತ್ತಲ ಗ್ರಾಮಸ್ಥರು ಪ್ರಯಾಣಿಕರಿಗೆ ನೆರವಾಗಿದ್ದಾರೆ.

ರೈಲ್ವೆ ಹಳಿ ಮತ್ತು ವಿದ್ಯುತ್‌ ಲೇನ್‌ ಮೇಲೆ ಮರ ಬಿದ್ದಿತ್ತು. ಅದನ್ನು ತೆರವು ಮಾಡಲು ಸಮಯ ಹಿಡಿಯಿತು. ಬೆಳಿಗ್ಗೆ ಕಾಫಿ, ತಿಂಡಿ ಇಲ್ಲದೆ ಸ್ವಲ್ಪ ತೊಂದರೆಯಾಯಿತು. ರೈಲು ನಿಂತ ಜಾಗದಲ್ಲಿ ಸ್ಥಳೀಯರು ಟೀ ಮಾಡಿಕೊಂಡು ಬಂದು ಪ್ರಯಾಣಿಕರಿಗೆ ಕೊಟ್ಟು ಸಹಕರಿಸಿದರು.

– ಸಿ.ಎನ್.ಕೆ ಮೂರ್ತಿ ಭಟ್‌, ಪ್ರಯಾಣಿಕ

ಸಂಜೆ ತಲುಪಿದ ರೈಲು

ಹಳಿ ಮೇಲೆ ಬಿದ್ದಿದ್ದ ಮರ ತೆರವು ಮಾಡಲಾಯಿತು. ಆದರೆ ವಿದ್ಯುತ್‌ ಲೇನ್‌ ರಿಪೇರಿಗೆ ಸಮಯ ಹಿಡಿಯಿತು. ಹಾಗಾಗಿ ಡಿಸೇಲ್‌ ಇಂಜಿನ್‌ ತರಿಸಿಕೊಂಡು ಇಂಟರ್‌ಸಿಟಿ ರೈಲನ್ನು ಮುಂದಕ್ಕೆ ಕೊಂಡೊಯ್ಯಲಾಯಿತು. ಬೆಳಿಗ್ಗೆ 7:15ಕ್ಕೆ ಶಿವಮೊಗ್ಗಕ್ಕೆ ತಲುಪಬೇಕಿದ್ದ ರೈಲು 11:51ಕ್ಕೆ ತಲುಪಿತು. ಭದ್ರಾವತಿಗೆ ಮಧ್ಯಾಹ್ನ 12:06ಕ್ಕೆ ತಲುಪಿತು. ಸಂಜೆ 5:39ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣ ತಲುಪಿತು. ಸಮಾನ್ಯವಾಗಿ 6 ಗಂಟೆ 40 ನಿಮಿಷಕ್ಕೆ ಮುಗಿಯಬೇಕಿದ್ದ ಪ್ರಯಾಣ, ಮಂಗಳವಾರ 12 ಗಂಟೆ 32 ನಿಮಿಷ ತಗುಲಿತು.

ಹಲವರಿಗೆ ಸಂಕಷ್ಟ, ಕೆಲವರಿಗೆ ಅನುಕೂಲ

ರೈಲು ವಿಳಂಬ ಸಂಚಾರದಿಂದ ತಾಳಗುಪ್ಪ, ಸಾಗರ, ಶಿವಮೊಗ್ಗ, ಭದ್ರಾವತಿ, ತರೀಕರೆ ಭಾಗದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಯಿತು. ಸಾಲು ಸಾಲು ರಜೆ, ಗೌರಿ – ಗಣೇಶ ಚತುರ್ಥಿಗಾಗಿ ಊರಿಗೆ ಬಂದವರು ಈ ರೈಲಿನಲ್ಲಿ ಬೆಂಗಳೂರಿಗೆ ಮರಳಿ ಕಚೇರಿಗಳಿಗೆ ತೆರಳುವವರಿದ್ದರು. ಅದರೆ ವಿಳಂಬದಿಂದಾಗಿ ಒಂದು ದಿನ ರಜೆ ಪಡೆಯಬೇಕಾದ ಅನಿವಾರ್ಯತೆ ಉಂಟಾಯಿತು. ನಾನಾ ಕೆಲಸಕ್ಕೆ ಬೆಂಗಳೂರಿಗೆ ತೆರಳಬೇಕಿದ್ದವರಿಗು ಸಮಸ್ಯೆಯಾಯಿತು.

ಇನ್ನೊಂದೆಡೆ ಬೀರೂರು, ಕಡೂರು, ಅರಸೀಕೆರೆಯಿಂದ ಬೆಂಗಳೂರಿಗೆ ತೆರಳಲು ಇತರೆ ರೈಲಿಗಾಗಿ ಕಾಯುತ್ತಿದ್ದವರಿಗೆ ತಡವಾಗಿ ಸಂಚರಿಸುತ್ತಿದ್ದ ಇಂಟರ್‌ಸಿಟಿ ರೈಲಿನಿಂದ ಅನುಕೂಲವಾಗಿದೆ. ಹಾಗಾಗಿ ಈ ರೈಲು ಬೆಂಗಳೂರಿನ ತನಕ ಸಂಪೂರ್ಣ ಭರ್ತಿಯಾಗಿಯೇ ತೆರಳಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.