ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆ ಹಾಗೂ ಫಲಿತಾಂಶ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಕುಲಸಚಿವರ ಕಚೇರಿ ಮುಂಭಾಗ ಪ್ರತಿಭಟಿಸಿದರು.
ವಿದ್ಯಾರ್ಥಿಗಳ ಡಿಮಾಂಡ್ ಏನು?
ವಿವಿಯಲ್ಲಿ ಪ್ರತಿ ಸೆಮಿಸ್ಟರ್ನಲ್ಲೂ ಪರೀಕ್ಷೆ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಪರೀಕ್ಷೆಗೆ ಹಾಜರಾಗಿದ್ದರೂ ಫಲಿತಾಂಶದಲ್ಲಿ ಗೈರಾಗಿರುವುದಾಗಿ ನಮೂದಿಸುವುದು, ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ, ಅಂಕಗಳ ವ್ಯತ್ಯಾಸ ಹಾಗೂ ಡಿಜಿಟಲ್ ಮೌಲ್ಯಮಾಪನದಲ್ಲಿ ದೋಷಗಳು ಮುಂದುವರಿದಿವೆ. ಯುಯುಸಿಎಂಎಸ್ ಪೋರ್ಟಲ್ನಲ್ಲಿ ತಾಂತ್ರಿಕ ದೋಷಗಳು, ಮರುಮೌಲ್ಯಮಾಪನ ಹಾಗೂ ಮರುಎಣಿಕೆ ಫಲಿತಾಂಶ ವಿಳಂಬ, ಅಂಕಪಟ್ಟಿ ಮತ್ತು ಪರೀಕ್ಷಾ ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಎನ್ಎಸ್ಯುಐ ಸಂಘಟನೆ ಆಕ್ರೋಶ ವ್ಯಕ್ತಪಡಿಸಿತು.

ಅಧಿಕಾರಿಗಳ ವಿರುದ್ಧ ಗರಂ
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕುವೆಂಪು ವಿವಿ ಆಡಳಿತದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಕುಲಪತಿ ಮತ್ತು ಕುಲಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಸಭೆ ಹಿನ್ನೆಲೆ ಕುಲಸಚಿವರು ಬೇರೆಡೆ ತೆರಳಿದ್ದರಿಂದ ಪರೀಕ್ಷಾಂಗ ಕುಲಸಚಿವ ಪ್ರೊ. ಆರ್.ತಿಮ್ಮರಾಯಪ್ಪ, ಉಪ ಕುಲಸಚಿವ ಗಿರೀಶ್ ಅವರು ಸ್ಥಳಕ್ಕೆ ಆಗಮಿಸಿದ್ದರು. ಅವರ ಎದುರು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಮಕ್ಕಳಿಗಾದರೆ ಹೀಗೆ ಮಾಡುತ್ತಿದ್ರಾ?
ವಿವಿ ಅಧಿಕಾರಿಗಳ ಮುಂದೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಸಮಸ್ಯೆ ವಿವರಿಸಿದರು. ಪರೀಕ್ಷೆ, ಫಲಿತಾಂಶ ಮತ್ತು ಅಂಕಪಟ್ಟಿ ವಿಷಯದ ಗೊಂದಲ ಕುರಿತು ವಿವಿಗೆ ಭೇಟಿ ನೀಡಿದರೆ ಅಧಿಕಾರಿಗಳು, ಸಿಬ್ಬಂದಿ ದರ್ಪದಿಂದ ನಡೆದುಕೊಳ್ಳುತ್ತಾರೆ. ಸರಿಯಾದ ಮಾಹಿತಿ ಕೊಡದೆ ವಿದ್ಯಾರ್ಥಿಗಳನ್ನು ಹೊರಗಟ್ಟುತ್ತಾರೆ. ತಾಂತ್ರಿಕ ಸಮಸ್ಯೆಯಿಂದ ಫಲಿತಾಂಶ ತಪ್ಪಾಗಿದ್ದರು ಮರುಮೌಲ್ಯಮಾಪನಕ್ಕೆ ಶುಲ್ಕವನ್ನು ವಿದ್ಯಾರ್ಥಿಗಳೇ ಏಕೆ ಭರಿಸಬೇಕು. ಹಿಂದಿನ ಸೆಮಿಸ್ಟರ್ಗಳ ಫಲಿತಾಂಶವನ್ನೆ ನೀಡದೆ ಮುಂದಿನ ವರ್ಷದ ಪರೀಕ್ಷೆ ಎದುರಿಸುವುದು ಹೇಗೆ. ನಿಮ್ಮ ಮಕ್ಕಳಿಗಾದರೆ ಹೀಗೆ ಮಾಡುತ್ತಿದ್ರಾ ಎಂದು ವಿದ್ಯಾರ್ಥಿಗಳು ವಿವಿ ಪರೀಕ್ಷಾಂಗ ವಿಭಾಗದ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಕುವೆಂಪು ವಿವಿ ಎಡವಟ್ಟಿನಿಂದ ಪರೀಕ್ಷೆ ಬರೆದಿದ್ದರೂ ಗೈರಾಗಿದ್ದಾರೆ ಎಂದು ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು ವಿಚಾರಿಸಿದಾಗ ತಾಂತ್ರಿಕ ಸಮಸ್ಯೆ ಎಂದು ಸಬೂಬು ಹೇಳುತ್ತಿದ್ದಾರೆ. ಡಿಜಿಟಲ್ ಮೌಲ್ಯಮಾಪನದಿಂದಾಗಿ ಇಂತಹ ಸಮಸ್ಯೆ ಉದ್ಭವವಾಗಿದೆ. ಡಿಜಿಟಲ್ ಮೌಲ್ಯಮಾಪನದಿಂದ ಅತಿ ಶೀಘ್ರ ಫಲಿತಾಂಶ ಪ್ರಕಟ ಆಗಲಿದೆ ಎಂದು ಹೇಳಿದ್ದರು. ಆದರೆ ಮೂರ್ನಾಲ್ಕು ತಿಂಗಳು ವಿಳಂಬವಾಗಿ ಫಲಿತಾಂಶ ಬರುತ್ತಿದೆ.
– ವಿಜಯ ಕುಮಾರ್, ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷ
ವಿವಿ ಅಧಿಕಾರಿಗಳು ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್
ಇದೇ ವೇಳೆ ಮಾತನಾಡಿದ ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಉಪ ಕುಲಸಚಿವ ಗಿರೀಶ್, ಶೀಘ್ರದಲ್ಲಿ ಸಮಸ್ಯೆ ಪರಿಹಾರ ಆಗಲಿದ ಎಂದು ಭರವಸೆ ನೀಡಿದರು. ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್.

ನಾನು ಅಧಿಕಾರ ಸ್ವೀಕರಿಸಿ ಒಂದೂವರೆ ತಿಂಗಳಾಗಿದೆ. ಸಮಸ್ಯೆಗಳು ಅರಿವಿಗೆ ಬಂದಿದೆ. ಮುಂದಿನ ತಿಂಗಳು ಅಂತ್ಯದ ವೇಳೆಗೆ ಫಲಿತಾಂಶ ಮತ್ತು ಸಮಸ್ಯೆ ಪರಿಹಾರ ಮಾಡಲಿದ್ದೇವೆ. ಇಲ್ಲವಾದಲ್ಲಿ ನಿಮ್ಮೊಂದಿಗೆ ನಾನು ಬಂದು ಕೂರುತ್ತೇನೆ.

ಒಂದೊಂದೇ ವಿಷಯದ ಫಲಿತಾಂಶ ಸಮಸ್ಯೆ ಪರಿಹಾರ, ಅಂಕಪಟ್ಟಿ ಮುದ್ರಣ ಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳ 15ರ ಒಳಗೆ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ನಿಮ್ಮ ಕಾಲೇಜು ತಲುಪಲಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿಯೇ ಅವುಗಳನ್ನು ಪಡೆಯಬಹುದು.

ಡಿಜಿಟಲ್ ಮೌಲ್ಯಮಾಪನ ಸಂಬಂಧ ಪರಿಶೀಲನೆಗೆ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನಾಳೆ ಕುವೆಂಪು ವಿವಿಗೆ ವರದಿ ಸಲ್ಲಿಸಲಿದೆ. ಆ ವರದಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತದೆ ಎಂದು ಉಪ ಕುಲಸಚಿವ ಗಿರೀಶ್ ತಿಳಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಚೇತನ್ ಗೌಡ, ಮಧು ಸೂದನ್, ಎನ್ಎಸ್ಯುಐ ಸಂಘಟನೆಯ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.