ಶಿವಮೊಗ್ಗ: ಅತ್ಯಲ್ಪ ಅವಧಿಯಲ್ಲಿ ಜಿಲ್ಲೆಯ ರೈಲ್ವೇ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಹೊಸ ರೈಲು ಸಂಪರ್ಕ ಕಲ್ಪಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿಯಲ್ಲಿ ₹1.88 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ವಿಸ್ತರಣೆ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸದ್ಯ 250 ಮೀಟರ್ ಉದ್ದದ ಪ್ಲಾಟ್ಫಾರಂ ಇದೆ. ಇದನ್ನು ಒಂದು ಮೀಟರ್ ಉದ್ದ ಮತ್ತು ಎತ್ತರಿಸಗುತ್ತಿದೆ. ಇದು ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ರೈಲುಗಳ ನಿಲುಗಡೆಗೆ ಅವಕಾಶ ದೊರೆಯಲಿದೆ ಎಂದರು.

ಉತ್ತರ ಭಾರತದ ಸಂಪರ್ಕ
ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ತಿರುಪತಿ, ಎರ್ನಾಕುಲಂ, ಬಿಹಾರ, ಜಾರ್ಖಂಡ್, ಚಂಡೀಘಡ ಹಾಗೂ ಗುವಾಹಟಿಗೆ ನೇರ ರೈಲು ಸಂಪರ್ಕ ಕಲ್ಪಿಸುವುದರ ಮೂಲಕ ಶಿವಮೊಗ್ಗವು ಪ್ರಮುಖ ರೈಲ್ವೇ ಜಂಕ್ಷನ್ ಆಗಿ ಪರಿವರ್ತನೆಗೊಳ್ಳಲಿದೆ. ಶಿವಮೊಗ್ಗ–ಶಿಕಾರಿಪುರ–ರಾಣೇಬೆನ್ನೂರು ಹೊಸ ಮಾರ್ಗದಿಂದ ಉತ್ತರ ಭಾರತಕ್ಕೂ ಸಂಪರ್ಕ ಸುಲಭವಾಗಲಿದೆ ಎಂದರು.
ಪ್ರಮುಖ ಕೋಚಿಂಗ್ ಡಿಪೋ
ಮುಂದಿನ ಎರಡು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ ಕೋಟೆಗಂಗೂರು ಕೋಚಿಂಗ್ ಡಿಪೋ ರಾಜ್ಯದ ಪ್ರಮುಖ ನಾಲ್ಕು ಡಿಪೋಗಳಲ್ಲಿ ಒಂದಾಗಲಿದೆ. ತಾಳಗುಪ್ಪ, ಸಾಗರ ಮತ್ತು ಶಿವಮೊಗ್ಗ ನಿಲ್ದಾಣಗಳನ್ನು ₹100 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಪ್ರತಿದಿನ ಸಂಚರಿಸುವ ರೈಲುಗಳ ಸಂಖ್ಯೆ 28ಕ್ಕೆ ಏರಿದೆ ಎಂದರು.
ಸೊರಬ ಹಾಗೂ ತೀರ್ಥಹಳ್ಳಿಗೂ ರೈಲು ಸಂಪರ್ಕ ಕಲ್ಪಿಸಲು ಹೊಸ ಮಾರ್ಗಗಳ ಸಮೀಕ್ಷೆ ಹಾಗೂ ದ್ವಿಪಥ ಟ್ರ್ಯಾಕ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ಬಿ. ಅಶೋಕನಾಯ್ಕ, ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್ ಸೇರಿ ಹಲವು ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.