ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ನಿರುದ್ಯೋಗ ಪ್ರಮಾಣ ಹೆಚ್ಚಳ ಮಾಡಿದೆ ಎಂದು ಆರೋಪಿಸಿದರು.

ಯಾರೆಲ್ಲ ಏನೆಲ್ಲ ಮಾತನಾಡಿದರು?
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಹೆಚ್.ಸಿ.ಯೋಗೇಶ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ: ‘ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಮನೆಗಳಲ್ಲಿ ದೀಪ ಬೆಳಗಿ ಎಂದು ಬಿಜೆಪಿಯವರು ಹೇಳಿದ್ದಾರೆ. ಮೋದಿ ಸರ್ಕಾರದ ಬಂದ ನಂತರ ನಿಮ್ಮ ಮನೆಯಲ್ಲಿ ಆರ್ಥಿಕವಾಗಿ ಸಬಲವಾಗಿದ್ದರೆ, ನಿಮ್ಮ ಮಕ್ಕಳು ಉದ್ಯೋಗ ಪಡೆದಿದ್ದರೆ ದೀಪ ಬೆಳಗಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿದರು. ಎರಡು ಉದ್ಯೋಗ ಸೃಷ್ಟಿಲು ಸಾದ್ಯವಾಗಲಿಲ್ಲ.’
ಎನ್.ರಮೇಶ್, ಕಾಂಗ್ರೆಸ್ ಮುಖಂಡ: ‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಕಳೆದ 13 ವರ್ಷದಿಂದ ನಿರುದ್ಯೋಗ ಪ್ರಮಾಣ ಹೆಚ್ಚಳ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿದಿದ್ದಾರೆ. ದೆಹಲಿಯಿಂದ ಹಳ್ಳಿ ಮಟ್ಟದ ತನಕ ಸರ್ಕಾರದ ವೈಫಲ್ಯವನ್ನು ಪ್ರತಿಭಟಿಸುತ್ತಿದೆ. ’
ಹರ್ಷಿತ್ ಗೌಡ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ: ‘ವರ್ಷಕ್ಕೆ ಎರಡು ಕೋಟಿಉದ್ಯೋಗ ಸೃಷ್ಟಿ, 15 ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದಿದ್ದರು. ಕೊನೆಗೆ ಮೆಲೋನಿಗೆ ಮೆಲೋಡಿ ಕೊಟ್ಟು ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಯುವಕರಿಗೆ ಯಾವ ಸಂದೇಶ ನೀಡುತ್ತಿದ್ದಾರೆ. ಆದ್ದರಿಂದ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗಿ ದಿನಾಚರಣೆ ಎಂದು ಘೋಷಣೆ ಮಾಡಬೇಕು. ’
ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಪಕ್ಷದ ಪ್ರಮುಖರಾದ ಕೆ.ದೇವೇಂದ್ರಪ್ಪ, ಕಲೀಂ ಪಾಷಾ, ಪ್ರವೀಣ್ ಕುಮಾರ್, ಚರಣ್ ಜೆ. ಶೆಟ್ಟಿ, ಗಿರೀಶ್, ಬಾಲಾಜಿ, ಇಫ್ರಾನ್, ಅಬ್ದುಲ್ ಸತ್ತಾರ್, ಬಾಬು, ರೇಷ್ಮಾ, ಸಕ್ಲೈನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಭದ್ರಾವತಿಯಲ್ಲು ಮೋದಿ ವಿರುದ್ಧ ಪ್ರತಿಭಟನೆ
ಭದ್ರಾವತಿ: ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಆದ್ದರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ ಎಂದು ಘೋಷಿಸಬೇಕು. ಉದ್ಯೋಗ ಸೃಷ್ಟಿಸಲಾಗದ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಯುವ ಕಾಂಗ್ರೆಸ್ ಮುಖಂಡರಾದ ಆರ್. ಮುರುಗೇಶ್, ಮೊಹಮ್ಮದ್ ಶಫಿ, ಪ್ರಜ್ವಲ್ ಎ., ಜಾಫರ್ ಸಾದಿಕ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.