ತೀರ್ಥಹಳ್ಳಿಯಲ್ಲಿ ವಂದೇ ಮಾತರಂ ಗೀತೆ ತಗಾದೆ, ಎಂಎಲ್‌ಎ ಆಕ್ಷೇಪ, ಸಿಎಂ ಉತ್ತರ

ತೀರ್ಥಹಳ್ಳಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ವಂದೇ ಮಾತರಂ ಪೂರ್ಣ ಹಾಡದ್ದಕ್ಕೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತೀರ್ಥಹಳ್ಳಿ ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಕಸ್ತೂರಿ ರಂಗನ್‌ ವರದಿ ಸಂವಾದ ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಮತ್ತು ನಾಡಗೀತೆ ಹಾಡಿಸಲಾಯಿತು. ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಯಿತು.

MLA Channabasappa and Chief Minister D.K. Shivakumar react during the Vande Mataram controversy at the Thirthahalli event

ಶಾಸಕ ಚನ್ನಬಸಪ್ಪ ಆಕ್ಷೇಪ

ಎರಡು ಚರಣ ಹಾಡಿಸಿದ್ದಕ್ಕೆ ಶಾಸಕ ಚನ್ನಬಸಪ್ಪ ವೇದಿಕೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಸ್ವಾಗತ ಭಾಷಣಕ್ಕು ಮುನ್ನ ಮೈಕ್‌ ಮುಂದೆ ಬಂದ ಶಾಸಕ ಚನ್ನಬಸಪ್ಪ, ಸರ್ಕಾರ ನಮ್ಮ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದೆ. ವಂದೇ ಮಾತರಂ ಗೀತೆಯನ್ನು ಎರಡು ಚರಣ ಮಾತ್ರ ಹಾಡಬೇಕು ಎಂಬ ನಿರ್ಧಾರ ಜನರ ಮೇಲೆ ಪರಿಣಾಮ ಬೀರುತ್ತಿದೆ. ಪೂರ್ಣ ವಂದೇ ಮಾತರಂ ಹೇಳಬೇಕುʼ ಎಂದು ಆಗ್ರಹಿಸಿದರು.

ಚನ್ನಬಸಪ್ಪ ಆಗ್ರಹಕ್ಕೆ ಸಿಎಂ ಉತ್ತರ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್‌, ನಾನು ಬದುಕಿನ ಮೇಲೆ ರಾಜಕಾರಣ ಮಾಡಲು ಬಂದಿದ್ದೇನೆ. ಭಾವನೆಗಳ ಮೇಲಲ್ಲ. ಚನ್ನಬಸಪ್ಪ ಅವರು ಕೆಣಕುತ್ತಿದ್ದಾರೆ. ಶಿವಮೊಗ್ಗಕ್ಕೆ ಬಂದಾಗ ಅಲ್ಲಿ ಈ ವಿಷಯವಾಗಿ ಚರ್ಚೆ ಮಾಡುತ್ತೇನೆ. ಪ್ರತಿಭಟನೆ ಮಾಡಿ ಹೊರಗೆ ಹೋಗುವುದಾದರೆ ಹೋಗಲಿ. ರಾಜಕಾರಣದಲ್ಲಿ ವಿರೋಧಿಗಳು, ಟೀಕಾಕಾರರು ಇದ್ದಾಗಷ್ಟೆ ರಾಜ್ಯಭಾರ ಮಾಡಲು ಸಾದ್ಯ. ಕಾಂಗ್ರೆಸ್‌ ಪಕ್ಷ ನಿಮ್ಮ ಆಚಾರ, ವಿಚಾರ ಹೇಳಲು ಅವಕಾಶ ಮಾಡಿಕೊಟ್ಟಿದೆ. ನನಗಿಂತಲು ಮೊದಲು ಜನರೆ ಉತ್ತರ ಕೊಟ್ಟಿದ್ದೀರʼ ಎಂದರು.